ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ನಗರದಲ್ಲಿ ನ.1ರಂದು ಕರಾಳ ದಿನ ಆಚರಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ 46 ನಾಯಕರು ಸೇರಿ ಹಲವರ ವಿರುದ್ಧ ಇಲ್ಲಿನ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯೋತ್ಸವ ದಿನದಂದೇ ಎಂಇಎಸ್‌ನವರು ಪ್ರತಿವರ್ಷ ಕರಾಳ ದಿನ ಆಚರಿಸುತ್ತಾರೆ. ಈ ಬಾರಿ ಅದಕ್ಕೆ ಅನುಮತಿ ಕೋರಿ ಬಂದಿದ್ದ ಎಂಇಎಸ್ ನಿಯೋಗಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಯಾವ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ಕೊಡುವುದಿಲ್ಲ’ ಎಂದು ತಿಳಿಸಿದ್ದರು.
ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರೂ, ನಾಡವಿರೋಧಿ ಚಟುವಟಿಕೆಗಾಗಿ ಎಂಇಎಸ್‌ಗೆ ಅನುಮತಿ ಕೊಡುವುದಿಲ್ಲ ಎಂದಿದ್ದರು. ಆದರೆ, ಅನುಮತಿ ಸಿಗದಿದ್ದರೂ ಎಂಇಎಸ್‌ನವರು ಕರಾಳ ದಿನ ಆಚರಿಸಿ ಉದ್ಧಟತನ ಮೆರೆದಿದ್ದರು.
‘ಅನುಮತಿ ನೀಡದಿದ್ದರೂ ಎಂಇಎಸ್‌ನವರು ಕಪ್ಪು ಬಟ್ಟೆ ಧರಿಸಿ, ಬೈಕ್ ರ್‍ಯಾಲಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದರು.
‘ಎಂಇಎಸ್‌ನ 46 ನಾಯಕರು ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆದಿದೆ’ ಎಂದು ನಗರ ಪೊಲೀಸ್ ಉಪ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ರೋಹನ್ ಜಗದೀಶ ‘ಪ್ರಜಾವಾಣಿ’ಗೆ ತಿಳಿಸಿದರು.
‘ದೊಂಬಿಗೆ ಪ್ರಚೋದನೆ, ನಿಯಮ ಬಾಹಿರವಾಗಿ ಗುಂಪಾಗಿ ಸೇರಿರುವುದು, ಸಂಚಾರಕ್ಕೆ ಅಡ್ಡಿಪಡಿಸಿರುವುದು ಮತ್ತಿತರ ಆರೋಪಗಳಡಿ ಎಂಇಎಸ್ ನಾಯಕರ ವಿರುದ್ಧ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದೇವೆ’ ಎಂದು ಮಾರ್ಕೆಟ್ ಠಾಣೆ ಪೊಲೀಸರು ಹೇಳಿದರು.
-------
ನೋಟಿಸ್ ಕೊಡುವಂತೆ ಆದೇಶಿಸಿತ್ತು
‘ಬೆಳಗಾವಿಯಲ್ಲಿ ನ.1ರಂದು ಕರಾಳ ದಿನ ಆಚರಣೆಗೆ ಅವಕಾಶ ನೀಡದಂತೆ ಪ್ರತಿಬಂಧಿಸಲು ಆದೇಶಿಸಬೇಕು’ ಎಂದು ಕೋರಿ ಬೆಳಗಾವಿಯ ಕನ್ನಡ ಹೋರಾಟಗಾರ ಮಲ್ಲಪ್ಪ ಅಕ್ಷರದ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಅ.30ರಂದು ನಡೆಸಿತ್ತು.
ಅರ್ಜಿದಾರರ ಮನವಿ ಪುರಸ್ಕರಿಸಿದ ನ್ಯಾಯಪೀಠ, ‘ಸಂವಿಧಾನ ಮತ್ತು ಮಾನವ ಹಕ್ಕುಗಳನ್ನು ಒಪ್ಪಿಕೊಂಡ ಬಳಿಕ, ಎಲ್ಲರೂ ಅದಕ್ಕೆ ಬದ್ಧರಾಗಿರಬೇಕು’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಳಗಾವಿ ಜಿಲ್ಲಾಧಿಕಾರಿ, ನಗರ ಪೊಲೀಸ್ ಕಮಿಷನರ್ ಮತ್ತು ಎಂಇಎಸ್ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ, ನವೆಂಬರ್ 5ಕ್ಕೆ ವಿಚಾರಣೆ ಮುಂದೂಡಿತ್ತು.
–––––––
ಎಂಇಎಸ್‌ನವರು ಕರಾಳ ದಿನ ಆಚರಿಸದಂತೆ ಪೊಲೀಸರು ಮೊದಲೇ ತಡೆಯಬೇಕಿತ್ತು. ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆಯಬೇಕಿತ್ತು
–ಮಲ್ಲಪ್ಪ ಅಕ್ಷರದ,
––
ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಿದ ಅರ್ಜಿದಾರ
ಕರಾಳ ದಿನ ಆಚರಿಸಿದವರ ವಿರುದ್ಧ ಪ್ರಕರಣ ದಾಖಲಿಸಿದರೆ ಸಾಲದು. ನಾಡವಿರೋಧಿ ಚಟುವಟಿಕೆ ಕೈಗೊಳ್ಳದಂತೆಯೇ ಅವರನ್ನು ತಡೆಯುವ ಕೆಲಸವಾಗಬೇಕಿತ್ತು
–ಅಶೋಕ ಚಂದರಗಿ, ಅಧ್ಯಕ್ಷ,
ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.