ADVERTISEMENT

ಡಿಸಿಸಿ ಬ್ಯಾಂಕಿಗೂ ತಟ್ಟಿತೇ ‘ಒಳಪೆಟ್ಟು’

ಅಧ್ಯಕ್ಷ ರಮೇಶ ಕತ್ತಿ, ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ಮಧ್ಯೆ ಮತ್ತೊಂದು ‘ಸಮರ’

ಸಂತೋಷ ಈ.ಚಿನಗುಡಿ
Published 4 ಅಕ್ಟೋಬರ್ 2024, 6:23 IST
Last Updated 4 ಅಕ್ಟೋಬರ್ 2024, 6:23 IST
ಅಣ್ಣಾಸಾಹೇಬ ಜೊಲ್ಲೆ
ಅಣ್ಣಾಸಾಹೇಬ ಜೊಲ್ಲೆ   

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ನಡೆದ ‘ಒಳಪೆಟ್ಟು’ ರಾಜಕಾರಣ ಈಗ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಕ್‌ (ಬಿಡಿಸಿಸಿ ಬ್ಯಾಂಕ್‌) ಅನ್ನೂ ತಳಕು ಹಾಕಿಕೊಂಡಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಆರು ತಿಂಗಳ ಹಿಂದೆ ಆರಂಭವಾದ ರಾಜಕೀಯ ಮೇಲಾಟ ಇನ್ನೂ ಮುಗಿದಿಲ್ಲ. ಮಾಜಿ ಸಂಸದರಾದ ರಮೇಶ ಕತ್ತಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಮಧ್ಯೆ ಮೊತ್ತೊಂದು ‘ಸಮರ’ಕ್ಕೆ ಸಿದ್ಧಗೊಂಡಿದ್ದಾರೆ.

ಡಿಸಿಸಿ ಬ್ಯಾಂಕ್ ಆವರಣದಲ್ಲಿ ಗುರುವಾರ ಸಾಮಾನ್ಯ ಸಭೆಯೂ ಗೋಪ್ಯವಾಗಿ ನಡೆಯಿತು. ಬ್ಯಾಂಕಿನ ಅಧ್ಯಕ್ಷರೂ ಆದ ರಮೇಶ ಕತ್ತಿ, ಉಪಾಧ್ಯಕ್ಷ ಸುಭಾಷ ಢವಳೇಶ್ವರ, ನಿರ್ದೇಶಕರಾದ ಅಣ್ಣಾಸಾಹೇಬ ಜೊಲ್ಲೆ, ಅರವಿಂದ ಪಾಟೀಲ, ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ‌ಜಾರಕಿಹೊಳಿ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಸೇರಿ 14 ನಿರ್ದೇಶಕರು ಪಾಲ್ಗೊಂಡಿದ್ದರು.

ಸದಸ್ಯತ್ವಕ್ಕೆ ಸಂಬಂಧಿಸಿ ರಮೇಶ ಕತ್ತಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಮಧ್ಯೆ ನಡೆದ ವಾಗ್ವಾದ ಸಭೆಯನ್ನೇ ವಿಭಜಿಸಿತು. ಬ್ಯಾಂಕ್‌ ಅಧ್ಯಕ್ಷರನ್ನೇ ಹೊರಗಿಟ್ಟು ಉಪಾಧ್ಯಕ್ಷರ ನೇತೃತ್ವದಲ್ಲಿ ಕೆಲವು ನಿರ್ದೇಶಕರು ಸಭೆ ನಡೆಸಿ ಅಚ್ಚರಿ ಮೂಡಿಸಿದರು.

ADVERTISEMENT

ನಡೆದಿದ್ದೇನು?: ನಿಪ್ಪಾಣಿ ತಾಲ್ಲೂಕಿನಲ್ಲಿ ಡಿಸಿಸಿ ಬ್ಯಾಂಕಿನ ಸದಸ್ಯರ ಸಂಖ್ಯೆ ಹೆಚ್ಚಿಸಬೇಕು ಎಂದು ನಿರ್ದೇಶಕರೂ ಆದ ಅಣ್ಣಾಸಾಹೇಬ ಜೊಲ್ಲೆ ಪಟ್ಟು ಹಿಡಿದರು. ಈ ಬಗ್ಗೆ ಎಲ್ಲ ನಿರ್ದೇಶಕರಿಂದ ಸಹಮತ ಮೂಡಿಲ್ಲ, ಇದಕ್ಕೆ ಅವಕಾಶವಿಲ್ಲ. ಎಲ್ಲರೂ ಒಮ್ಮತ ಮೂಡಿಸಿಕೊಂಡು ಬನ್ನಿ ಎಂದು ರಮೇಶ ಕತ್ತಿ ಕಡ್ಡಿ ಮುರಿದಂತೆ ಹೇಳಿದರು. ಇದೇ ವಿಚಾರ ಇಬ್ಬರ ಮಧ್ಯೆ ಮತ್ತೊಂದು ಹಂತದ ‘ವಾಗ್ಯುದ್ಧ’ ಹುಟ್ಟುಹಾಕಿತು ಎಂದು ಮೂಲಗಳು ಹೇಳಿವೆ.

ಸದಸ್ಯರ ಸಂಖ್ಯೆ ಹೆಚ್ಚು ಮಾಡಿದರೆ ಮುಂದಿನ ನಿರ್ದೇಶಕರ ಚುನಾವಣೆಯಲ್ಲಿ ‘ಬಲಾ–ಬಲ’ ವ್ಯತ್ಯಾಸವಾಗುತ್ತದೆ ಎಂಬುದು ರಮೇಶ ಕತ್ತಿ ಅವರ ಲೆಕ್ಕಾಚಾರ ಎನ್ನುತ್ತವೆ ಬಿಜೆಪಿ ಮೂಲಗಳು. ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣರಾದರು ಎಂಬುದು ಅಣ್ಣಾಸಾಹೇಬ ಅವರ ಕೋಪ.

ಸಾಮಾನ್ಯ ಸಭೆ ಬಹಿಷ್ಕರಿಸಿದ ಅಣ್ಣಾಸಾಹೇಬ ಜೊಲ್ಲೆ ತಮ್ಮ ಬೆಂಬಲಿಗರನ್ನು ಸೇರಿಸಿಕೊಂಡು ಉಪಾಧ್ಯಕ್ಷರ ನೇತೃತ್ವದಲ್ಲಿ ಬೇರೆ ಸಭೆ ಮಾಡಿದರು. ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಕೂಡ ಇದೇ ಸಭೆಯಲ್ಲಿ ಪಾಲ್ಗೊಂಡಿದ್ದು ಅಚ್ಚರಿಗೆ ಕಾರಣವಾಯಿತು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ಮುಖಂಡ ಉತ್ತಮ ಪಾಟೀಲ ಸೇರಿದಂತೆ ಹಲವು ನಾಯಕರು ನಿರ್ದೇಶಕರಾಗುವ ಸ್ಪರ್ಧೆಯಲ್ಲಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್‌ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಟಿಕೆಟ್‌ ವಂಚಿತರಾದವರೂ ತಮ್ಮ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದೇ ಕಾರಣಕ್ಕೆ ಸದಸ್ಯತ್ವ ಹೆಚ್ಚಳದ ಮಾತು ಕೇಳಿಬಂದಿದೆ ಎಂಬುದು ಮೂಲಗಳ ಮಾಹಿತಿ.

ರಮೇಶ ಕತ್ತಿ
ಬೆಳಗಾವಿ ಡಿಸಿಸಿ ಬ್ಯಾಂಕ್

- ವರ್ಷಕ್ಕೂ ಮುನ್ನವೇ ಸಿದ್ಧತೆ

ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಆಯ್ಕೆ ಚುನಾವಣೆಗೆ ಇನ್ನೂ ಒಂದು ವರ್ಷ ಕಾಲಾವಕಾಶವಿದೆ. ಆದರೆ ರಾಜಕೀಯ ಜಿದ್ದಾಜಿದ್ದಿಗಳು ಈಗಿನಿಂದಲೇ ತಂತಮ್ಮ ಸಿದ್ಧತೆ ಆರಂಭಿಸಿದ್ದಾರೆ. ಅದರ ಭಾಗಿವಾಗಿಯೇ ಸದಸ್ಯತ್ವ ನೋಂದಣಿ ಕೂಗು ಕೇಳಿಬಂದಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರೇ ಈ ಬ್ಯಾಂಕ್‌ ನಿರ್ದೇಶಕರಿಗೆ ಮತ ಹಾಕಿ ಆಯ್ಕೆ ಮಾಡಬೇಕು. ಸದಸ್ಯರಾಗಿ ವರ್ಷ ಕಳೆದ ಮೇಲೆ ಮತದಾನ ಹಕ್ಕು ಸಿಗುತ್ತದೆ. ಹೀಗಾಗಿ ಈಗಿನಿಂದಲೇ ಹೊಸ ಸದಸ್ಯತ್ವ ಆರಂಭಿಸಬೇಕು ಎಂಬುದು ಕೆಲ ನಿರ್ದೇಶಕರ ಒತ್ತಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.