ADVERTISEMENT

ಡಿಸಿಸಿ ಬ್ಯಾಂಕಿನತ್ತ ಹೆಬ್ಬಾಳಕರ ಚಿತ್ತ

ಬ್ಯಾಂಕ್‌ ಮೇಲೆ ಹಿಡಿತ ಸಾಧಿಸಲು ತುದಿಗಾಲಲ್ಲಿ ನಿಂತ ಜಾರಕಿಹೊಳಿ, ಜೊಲ್ಲೆ ಕುಟುಂಬ

ಸಂತೋಷ ಈ.ಚಿನಗುಡಿ
Published 8 ಅಕ್ಟೋಬರ್ 2024, 5:16 IST
Last Updated 8 ಅಕ್ಟೋಬರ್ 2024, 5:16 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಮುಂದಿನ ವರ್ಷ ಬಿಡಿಸಿಸಿ ಬ್ಯಾಂಕ್‌ ಚುನಾವಣೆ ನಡೆಯಲಿದೆ. ಎಲ್ಲರೂ ಸಿದ್ದತೆ ನಡೆಸಿದ್ದಾರೆ. ನಾವೂ ಸಿದ್ಧತೆ ಮಾಡಿಕೊಂಡಿದ್ದೇವೆ...’

ಮಹಿಳಾ ಮತ್ತು ಮತ್ತು ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಈ ಮಾತು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಹೊಸ ಗಾಳಿ ಬೀಸುವಂತೆ ಮಾಡಿದೆ.

ತಮ್ಮ ಎರಡು ದಶಕಗಳ ರಾಜಕಾರಣದಲ್ಲಿ ಲಕ್ಷ್ಮಿ ಹೆಬ್ಬಾಳಕರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಕ್ರಿಯಾಶೀಲವಾಗಿದ್ದಾರೆ. ಒಂದು ಬಾರಿ ವಿಧಾನಸಭೆಯಲ್ಲಿ ಸೋಲುಂಡ ಅವರು, ಎರಡನೇ ಬಾರಿಗೆ ಆಯ್ಕೆಯಾಗಿ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರ ಪುತ್ರ ಮೃಣಾಲ್‌ ಸೋಲುಂಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಸ್ವತಃ ಲಕ್ಷ್ಮಿ ಅವರು ಸುರೇಶ ಅಂಗಡಿ ವಿರುದ್ಧ ಸೋಲುಂಡಿದ್ದರು.

ADVERTISEMENT

ರಾಜಕೀಯ ಹೊರತಾಗಿ, ಸಕ್ಕರೆ ಕಾರ್ಖಾನೆ ಮತ್ತಿತರ ಉದ್ಯಮಗಳಲ್ಲೂ ಹೆಬ್ಬಾಳಕರ ಕುಟುಂಬ ತೊಡಗಿಕೊಂಡಿದೆ. ಆದರೆ, ಇದೇ ಮೊದಲಬಾರಿಗೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಚುನಾವಣೆಗೂ ಸಿದ್ಧರಾಗುತ್ತಿದ್ದಾರೆ ಎಂಬುದು ಅವರ ಆಪ್ತವಲಯದ ಮಾತು.

ಮತ್ತೆ ಮುಖಾ– ಮುಖಿ: ಒಂದೆಡೆ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಸಚಿವ ಸತೀಶ ಜಾರಕಿಹೊಳು ಅವರು ಡಿಸಿಸಿ ಬ್ಯಾಂಕ್‌ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ರಾಜಕೀಯ ಹಾಗೂ ಸಹಕಾರ ರಂಗದಲ್ಲಿ ಬಲಾಢ್ಯ ನಾಯಕರಾಗಿದ್ದ ಉಮೇಶ ಕತ್ತಿ ಅವರ ನಿಧನದ ನಂತರ, ಜಾರಕಿಹೊಳಿ ಸಹೋದರರು ಡಿಸಿಸಿ ಬ್ಯಾಂಕಿನತ್ತ ಒಲವು ತೋರಿದರು. ಈಗ ಉಮೇಶ ಕತ್ತಿ ಅವರ ಸಹೋದರ ರಮೇಶ ಕತ್ತಿ ಕೂಡ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕತ್ತಿ ಸಹೋದರರ ಕೈಯಿಂದ ಜಾರಿದ ಬ್ಯಾಂಕನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಜಾರಕಿಹೊಳಿ ಸಹೋದರರು ತುದಿಗಾಲಲ್ಲಿ ನಿಂತಿದ್ದಾರೆ. ‘ಸಹಕಾರ ಧುರೀಣ’ ಎಂದೇ ಹೆಸರಾದ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಈ ಅವಧಿಗೆ ಅಧ್ಯಕ್ಷರಾಗಿಯೇ ಸಿದ್ಧ ಎಂದು ಹಟ ತೊಟ್ಟಿದ್ದಾರೆ.

ಏತನ್ಮಧ್ಯೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತು ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿದೆ. ರಾಜಕಾರಣದಂತೆಯೇ, ಸಹಕಾರ ರಂಗದಲ್ಲೂ ಜಾರಕಿಹೊಳಿ ಕುಟುಂಬದೊಂದಿಗೆ ಸಡ್ಡು ಹೊಡೆಯುವ ಸಾಧ್ಯತೆ ಹೆಚ್ಚಿದೆ ಎಂಬುದು ಧುರೀಣರ ಲೆಕ್ಕಾಚಾರ.

ರಾಜಕೀಯದಲ್ಲಿ ಹಾವು– ಮುಂಗೂಸಿ ವಾಗ್ವಾದಗಳು ನಿರಂತರ ನಡೆದೇ ಇವೆ. ಅದೀಗ ಸಹಕಾರ ರಂಗಕ್ಕೂ ಅಂಟಿಕೊಳ್ಳುವುದೇ, ಇಲ್ಲವೇ ಎಂಬುದು ಕುತೂಹಲ ಕೆರಳಿಸಿದೆ.

ರಮೇಶ ಜಾರಕಿಹೊಳಿ
ಅಣ್ಣಾಸಾಹೇಬ ಜೊಲ್ಲೆ
ರಮೇಶ ಕತ್ತಿ
ಬಾಲಚಂದ್ರ ಜಾರಕಿಹೊಳಿ
ಸತೀಶ ಜಾರಕಿಹೊಳಿ

ಸಾವಿರಾರು ಕೋಟಿ ವ್ಯವಹಾರ ಮಾಡುವ ಡಿಸಿಸಿ ಬ್ಯಾಂಕ್‌ ಸಹಕಾರ ಕ್ಷೇತ್ರದಲ್ಲಿ ಆರಂಭವಾದ ಧ್ರುವೀಕರಣ ಜೊಲ್ಲೆ, ಹೆಬ್ಬಾಳಕರ, ಜಾರಕಿಹೊಳಿ ಕುಟುಂಬಗಳ ಮೇಲಾಟ

ಯಾಕಿಷ್ಟು ಕುತೂಹಲ? ಬಿಡಿಸಿಸಿ ಬ್ಯಾಂಕ್‌ ₹5797.29 ಕೋಟಿ ಠೇವಣಿ ₹7894.96 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹5230.74 ಕೋಟಿ ಸಾಲ ನೀಡಿದ್ದು 40 ಲಕ್ಷ ರೈತರಿಗೆ ಆಸರೆಯಾಗಿದೆ. ಮೇಲಾಗಿ ಜಿಲ್ಲೆಯ ರಾಜಕಾರಣದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಇದೇ ಕಾರಣಕ್ಕೆ ಪ್ರತಿಷ್ಠಿತ ಕುಟುಂಬಗಳೆಲ್ಲವೂ ಈಗ ಬ್ಯಾಂಕಿನತ್ತ ಚಿತ್ತ ಹಾಕಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.