ಬೆಳಗಾವಿ: ಶಾಲೆ ಪರವಾನಗಿ ನವೀಕರಣಕ್ಕೆ ₹40 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಬೆಳಗಾವಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (ಡಿಡಿಪಿಐ) ಉಪನಿರ್ದೇಶಕ ಬಸವರಾಜ ನಾಲತವಾಡ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
‘ಚನ್ನಮ್ಮನ ಕಿತ್ತೂರು ತಾಲ್ಲೂಕಿನ ತುರುಮುರಿ ಗ್ರಾಮದ ಬಸವೇಶ್ವರ ಶಿಕ್ಷಣ ಸಂಸ್ಥೆಯ ಶಾಲೆ ಪರವಾನಗಿ ನವೀಕರಣಕ್ಕೆ ಬಸವರಾಜ ನಾಲತವಾತ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥ ಅರ್ಜುನ ಕುರಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅರ್ಜುನ ಕುರಿ ಅವರಿಂದ ಶುಕ್ರವಾರ ಲಂಚ ಪಡೆಯುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಲಾಯಿತು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿ ಡಿಡಿಪಿಐ ಕುರ್ಚಿಗಾಗಿ ಎ.ಬಿ.ಪುಂಡಲೀಕ ಹಾಗೂ ಬಸವರಾಜ ನಾಲತವಾಡ ಮಧ್ಯೆ ತಿಂಗಳ ಹಿಂದೆ ಜಿದ್ದಾಜಿದ್ದಿ ಇತ್ತು. ಒಂದೂವರೆ ವರ್ಷದಿಂದ ಡಿಡಿಪಿಐ ಆಗಿದ್ದ ನಾಲತವಾಡ ಅವರನ್ನು, ಹೊಸ ಸರ್ಕಾರ ಬಂದ ಮೇಲೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಯಾವುದೇ ಹುದ್ದೆ ತೋರಿಸಿರಲಿಲ್ಲ. ಅವರ ಜಾಗಕ್ಕೆ ಎ.ಬಿ.ಪುಂಡಲೀಕ ಅವರನ್ನು ನಿಯೋಜಿಸಲಾಗಿತ್ತು. ಕೆಎಟಿ ಮೊರೆ ಹೋದ ನಾಲತವಾಡ ಅವರು ಮತ್ತೆ ಬೆಳಗಾವಿ ಡಿಡಿಪಿಐ ಕಚೇರಿಗೆ ನಿಯೋಜನೆ ಮಾಡಿಸಿಕೊಂಡು ಆದೇಶ ತಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.