ಚನ್ನಮ್ಮನ ಕಿತ್ತೂರು: ‘ರೈತ ವಿರೋಧಿ ಧೋರಣೆ ತಳೆದಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹಿಡಿದಿರುವ ಚಳಿಯನ್ನು ಬಿಡಿಸಲಾಗುವುದು. ವಿಧಾನಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ರೈತ ಮುಖಂಡ ಇಂಗಳಗುಪ್ಪೆ ಕೃಷ್ಣೇಗೌಡ ಘೋಷಿಸಿದರು.
ಇಲ್ಲಿಯ ಗುರುವಾರ ಪೇಟೆಯಲ್ಲಿ ಸೋಮವಾರ ರೈತಸಂಘಗಳ ಒಕ್ಕೂಟದ ಕೇಂದ್ರ ಕಚೇರಿಗೆ ಚಾಲನೆ ನೀಡಿ ಮಾತನಾಡಿದ ಅವರು ‘ನೆಲ, ಜಲ, ಭಾಷೆ ವಿಷಯದಲ್ಲಿ ರಾಜಕಾರಣ ಮಾಡುತ್ತಿರುವ ನಾಯಕರಿಗೂ ಪಾಠ ಕಲಿಸಲಾಗುವುದು’ ಎಂದು ಹೇಳಿದರು.
‘18 ರೈತಸಂಘಟನೆಗಳ ಸದಸ್ಯರು ಈ ಒಕ್ಕೂಟದಲ್ಲಿ ಸೇರಿಕೊಂಡಿದ್ದಾರೆ. ಚುನಾವಣೆ ಮುಗಿದ ನಂತರ ಇನ್ನೂ 18 ಸಂಘಟನೆಗಳು ಇದರಡಿ ಬರುತ್ತವೆ. ಎಲ್ಲರೂ ಒಂದು ಬಲಿಷ್ಠ ಶಕ್ತಿಯಾಗಿ ಹೋರಾಟ ಮಾಡಲಾಗುವುದು’ ಎಂದರು.
‘ಸ್ವಾತಂತ್ರ್ಯ ಹೋರಾಟದ ನೆಲವಾಗಿರುವ ಚನ್ನಮ್ಮನ ಕಿತ್ತೂರಿನಿಂದಲೇ ಹೋರಾಟದ ಕಹಳೆ ಮೊಳಗಿಸಲಾಗುವುದು. ನೆಲ, ಜಲ, ಭಾಷೆ, ರೈತರ ಸಮಸ್ಯೆಗಳ ಬಗ್ಗೆ ಗೋಕಾಕ ಮಾದರಿ ಹೋರಾಟ ರೂಪಿಸಲಾಗುವುದು’ ಎಂದು ಹೇಳಿದರು.
‘ಕೆಲವು ರೈತ ಸಂಘಟನೆಗಳು ಮುಖಂಡರು ಬೆಂಗಳೂರು ಮತ್ತು ದೆಹಲಿಗೆ ಮುಗ್ಧ ರೈತರನ್ನು ಕರೆದುಕೊಂಡು ಹೋಗಿ ತಮ್ಮ ಬೇಳೆ ಬೇಯಿಸಿಕೊಂಡರು. ಅಂಥವರ ಮುಖವಾಡವನ್ನು ಮುಂದಿನ ದಿನಗಳಲ್ಲಿ ಜನರ ಮುಂದೆ ಬಿಚ್ಚಿಡಲಾಗುವುದು’ ಎಂದು ತಿಳಿಸಿದರು.
ರೈತಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬೀರಪ್ಪ ದೇಶನೂರು ಹಾಗೂ ಮುಖಂಡ ಬಸನಗೌಡ ಪಾಟೀಲ ಮಾತನಾಡಿ, ‘ಈಗ ಬಂದಿರುವ ಲೋಕಸಭೆ ಚುನಾವಣೆಯಲ್ಲಿ ಆಯಾ ಕ್ಷೇತ್ರದಲ್ಲಿ ಅವರಿಗೆ ಸರಿಯೆನ್ನಿಸುವ ಅಭ್ಯರ್ಥಿಗೆ ಮತ ನೀಡಬೇಕು ಎಂದು ಸಭೆಯಲ್ಲಿ ತಿಳಿಸಿದ್ದೇವೆ. ಯಾವುದೇ ಒಂದು ಪಕ್ಷವನ್ನು ಬೆಂಬಲಿಸುವ ಇಚ್ಛೆಯನ್ನು ಮುಖಂಡರು ಹೊಂದಿಲ್ಲ’ ಎಂದು ಹೇಳಿದರು.
ಮುಖಂಡರಾದ ಶಂಕರ ಅಂಬಲಿ, ಹನುಮಂತಪ್ಪ ದೇವಗಿಹಳ್ಳಿ, ದುರ್ಗಪ್ಪ ನಾಯಕ, ಮಲಕಾಜಪ್ಪ ಕುಡೊಳ್ಳಿ, ಸಿದ್ದಲಿಂಗಯ್ಯ ಒಕ್ಕುಂದಮಠ, ಹನುಮಂತಪ್ಪ ನಾಯಕ, ಹೇಮಾ ಕಾಜಗಾರ, ಸಹನಾ ಹಂಚಿಗಿ, ಮಾರುತಿಗೌಡ ಪಾಟೀಲ, ಈರಣ್ಣ ಅಂಗಡಿ, ತುಮಕೂರು, ಬೆಂಗಳೂರು, ಮಂಡ್ಯ, ಮೈಸೂರು, ಹಾವೇರಿ, ಕೊಪ್ಪಳ, ಧಾರವಾಡ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳ ರೈತ ಮುಖಂಡರು ಭಾಗವಹಿಸಿದ್ದರು.
ಸರ್ಕಾರ ರಚನೆಯಲ್ಲಿ ಗೋಕಾಕದವರು ಮಹತ್ವದ ಪಾತ್ರ ಆಡುತ್ತಾರೆ. ಆದರೆ ಅವರಿರುವ ಜಿಲ್ಲೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರೂ ಸಿಗುತ್ತಿಲ್ಲ. ಜನ ಪರದಾಡುವಂತಾಗಿದೆ– ಶಂಕರ ಅಂಬಲಿ, ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.