ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಗರ್ಜೂರ, ಸಂಗೊಳ್ಳಿ ಗ್ರಾಮಗಳಿಗೆ ಸಂಪರ್ಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಘಟಕದ ಆಶ್ರಯದಲ್ಲಿ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು ಶನಿವಾರ ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಸಂಗೊಳ್ಳಿ ಗ್ರಾಮದ ಬಸ್ ತಂಗುದಾಣದಲ್ಲಿ ಬಸ್ ತಡೆದು ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ ಸಿಗದೆ ಶಾಲೆ, ಕಾಲೇಜು ಹೋಗಲು ಅನನುಕೂಲವಾಗಿದೆ. ಸರಿಯಾಗಿ ಬಸ್ ಬಿಡುವಂತೆ ಘಟಕ ವ್ಯವಸ್ಥಾಪಕರಿಗೆ ಸಾಕಷ್ಟು ಸಲ ಮನವಿ ಮಾಡಲಾಗಿದೆ. ಆದರೆ ಘಟಕ ವ್ಯವಸ್ಥಾಪಕರು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಬಸ್ ತಡೆ ಅನಿವಾರ್ಯ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಅಪ್ಪಣ್ಣ ಹಡಪದ ಮಾತನಾಡಿ, ಸಮಯಕ್ಕೆ ಸರಿಯಾಗಿ ಬಸ್ ಬಿಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ವಿಷಯ ತಿಳಿದು ವಿಭಾಗೀಯ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸೋಮವಾರದಿಂದ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಆಗ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರು.
ಅದೇ ಬಸ್ ಮೂಲಕ ಸಾರಿಗೆ ಘಟಕಕ್ಕೆ ಬಂದು ಅಧಿಕಾರಿಗಳಿಗೆ ತಮ್ಮ ಸಮಸ್ಯೆ ತಿಳಿಸಿದರು. ಸಮಸ್ಯೆಗೆ ಸ್ಪಂದಿಸದಿದ್ದರೆ ಘಟಕಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ವಿದ್ಯಾರ್ಥಿಗಳಾದ ಮಹಾಂತೇಶ ಹೆಗಡಿ, ಪ್ರಥಮೇಶ ಅಂಗಡಿ, ಚೇತನ ರುದ್ರಾಪೂರ, ವಿದ್ಯಾರ್ಥಿನಿಯರಾದ ಮೇಘಾ ಅಂಗಡಿ, ಲಕ್ಷ್ಮೀ ಸಂಗೊಳ್ಳಿ, ಪೂಜಾ ಹೊಳೆಪ್ಪನವರ, ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.