ಸವದತ್ತಿ: ಬರ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘದಿಂದ ಶಿರಸ್ತೇದಾರ್ ಶಶಿರಾಜ್ ವನಕೆ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಪ್ರಮುಖ ಎಲ್.ಎಸ್. ನಾಯಕ ಮಾತನಾಡಿ, ‘ಬೆಳೆ ನಾಶವಾದ ನಂತರ ಸಮೀಕ್ಷೆ ನಡೆಸಿ ಜಮೀನಿನಲ್ಲಿ ಬೆಳೆಗಳೇ ಇಲ್ಲವೆಂದು ವರದಿ ನೀಡಿದ್ದಾರೆ. ಜೊತೆಗೆ ರೈತರೊಂದಿಗೆ ಸಮೀಕ್ಷೆದಾರರ ನಡುವಳಿಕೆ ಸೌಜನ್ಯಯುತವಾಗಿಲ್ಲ. ಸರ್ಕಾರವೇ ಬರಪೀಡಿತವೆಂದು ಘೋಷಿಸಿದೆ. ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಬರ ಪರಿಹಾರ ಹಂಚಿಕೆಯಾಗುತ್ತಿದೆ. ಇದೀಗ ಸಮೀಕ್ಷೆ ಹೆಸರಿನಲ್ಲಿ ಬಹು ಸಂಖ್ಯೆ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ.
ಹಣ ಜಮೆಯ ಕುರಿತು ಕೃಷಿ ಇಲಾಖೆ ಕಚೇರಿಯಲ್ಲಿ ವಿಚಾರಿಸಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ತುರ್ತಾಗಿ ಮಾಹಿತಿ ನೀಡಲು ಕ್ರಮ ಜರುಗಿಸಬೇಕು. ಜೊತೆಗೆ ಭೂಮಿ ಸರ್ವೇಕ್ಷಣೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ತಾಲ್ಲೂಕಿನ ಎಲ್ಲ ರೈತರ ಖಾತೆಗೆ ಪರಿಹಾರ ಶೀಘ್ರವಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಶಂಕ್ರೆಪ್ಪ ತೊರಗಲ್ಲ, ಶ್ರೀಕಾಂತ ಹಟ್ಟಿಹೊಳಿ, ಬಿ.ಎಸ್. ಕಪ್ಪಣ್ಣವರ, ಎಂ.ಎಸ್.ನಡುವಿನಹಳ್ಳಿ, ನಾಗಪ್ಪ ಪ್ರಭುನವರ ಹಾಗೂ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.