ಬೆಳಗಾವಿ: ಜಿಲ್ಲೆಯಾದ್ಯಂತ ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಹಾಲಿನ ಉತ್ಪನ್ನಗಳಾದ ಮಜ್ಜಿಗೆ, ಮೊಸರು ಹಾಗೂ ಲಸ್ಸಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.
ಸರ್ಕಾರಿ ಸ್ವಾಮ್ಯದ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಭಾಗವಾದ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದಲ್ಲಿ (ಬೆಮುಲ್) ಈ ಉತ್ಪನ್ನಗಳ ಮಾರಾಟ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಳಿಗ್ಗೆಯಿಂದಲೇ ಏರುಗತ್ತಿಯಲ್ಲಿ ಕಂಡುಬರುತ್ತಿರುವ ಬಿರುಬಿಸಿಲಿನ ವಾತಾವರಣದ ನಡುವೆ ಜನರು ಆರೋಗ್ಯ ಕಾಪಾಡಿಕೊಳ್ಳಲು ಮಜ್ಜಿಗೆ, ಲಸ್ಸಿ ಕುಡಿಯುವುದು ಹಾಗೂ ಊಟದಲ್ಲಿ ಮೊಸರು ಬಳಸುವುದು ಸಾಮಾನ್ಯವಾಗಿದೆ. ಪರಿಣಾಮ, ಒಕ್ಕೂಟದಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ.
ಹೋದ ವರ್ಷಕ್ಕೆ ಹೋಲಿಸಿದರೆ ಒಕ್ಕೂಟದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹಾಲಿನ ಉತ್ಪನ್ನಗಳ ಮಾರಾಟವಾಗುತ್ತಿರುವುದು ಅಂಕಿ–ಅಂಶಗಳಿಂದ ಕಂಡುಬಂದಿದೆ.
ವರವಾದ ಚುನಾವಣೆ
ಈಚೆಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯ ಪ್ರಚಾರ ಸಮಾವೇಶ, ರ್‍ಯಾಲಿ, ಸಭೆ ಮೊದಲಾದವುಗಳ ಸಂದರ್ಭದಲ್ಲಿ ರಾಜಕೀಯ ಪಕ್ಷದವರು ಹೆಚ್ಚಿನ ಪ್ರಮಾಣದಲ್ಲಿ ಮಜ್ಸಿಗೆ ಹಾಗೂ ಲಸ್ಸಿಯನ್ನು ಖರೀದಿಸಿದ್ದರು. ಒಕ್ಕೂಟದೊಂದಿಗೆ ಇತರ ಖಾಸಗಿ ಕಂಪನಿಗಳೂ ಚುನಾವಣೆ ವೇಳೆ ಲಾಭ ಮಾಡಿಕೊಂಡಿವೆ.
ಚಿಕ್ಕೋಡಿಯಲ್ಲಿ ಬಿಜೆಪಿ ಆಯೋಜಿಸಿದ್ದ, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ವಿಜಯ ಸಂಕಲ್ಪ ರ‍್ಯಾಲಿಗಾಗಿ ಬೆಮುಲ್‌ನಿಂದ 1 ಲಕ್ಷ ಪಾಕೆಟ್ ಮಸ್ಸಿಗೆಯನ್ನು ಖರೀದಿಸಲಾಗಿತ್ತು. ಬೆಮುಲ್‌ನಲ್ಲಿ ನಿತ್ಯ 50ಸಾವಿರ ಪಾಕೆಟ್ (ತಲಾ 200 ಎಂ.ಎಲ್.) ಮೊಸರು ತಯಾರಿಕೆ ಸಾಮರ್ಥ್ಯವಿದೆ. ದುಪ್ಪಟ್ಟು ಬೇಡಿಕೆ ಬಂದಿದ್ದಿರಂದ ನೆರೆಯ ಧಾರವಾಡ ಒಕ್ಕೂಟದಿಂದ 50ಸಾವಿರ ಪಾಕೆಟ್‌ಗಳನ್ನು ತರಿಸಿಕೊಳ್ಳಲಾಗಿತ್ತು!
ಮಾರಾಟದಲ್ಲಿ ಪ್ರಗತಿ
‘ಹಾಲಿನ ಉತ್ಪನ್ನಗಳ ಮಾರಾಟ ಚೆನ್ನಾಗಿ ಆಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಮಜ್ಜಿಗೆ ಮಾರಾಟ ಶೇ 20ರಷ್ಟು ಜಾಸ್ತಿಯಾಗಿದೆ. ಹಿಂದಿನ ವರ್ಷ ಈ ಸಂದರ್ಭದಲ್ಲಿ ನಿತ್ಯ 6ಸಾವಿರದಿಂದ 7ಸಾವಿರ ಪಾಕೆಟ್‌ಗಳಷ್ಟು (ತಲಾ 200 ಎಂ.ಎಲ್) ಮಾರಾಟವಾಗಿತ್ತು. ಈ ಬಾರಿ 12ಸಾವಿರ ಪಾಕೆಟ್‌ಗಳು ಮಾರಾಟವಾಗುತ್ತಿವೆ. ಅಂದರೆ ನಿತ್ಯ 2,500ದಿಂದ 3ಸಾವಿರ ಲೀಟರ್‌ನಷ್ಟು ಆಗುತ್ತದೆ. ಲಸ್ಸಿ ಮಾರಾಟದಲ್ಲೂ ಶೇ 20ರಷ್ಟು ಪ್ರಗತಿಯಾಗಿದೆ. 3,500ರಿಂದ 4ಸಾವಿರ ಲೀಟರ್‌ನಷ್ಟು ಲಸ್ಸಿ ಮಾರಾಟವಾಗುತ್ತಿದೆ’ ಎಂದು ಒಕ್ಕೂಟದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸೋಮ್‌ಪ್ರಸನ್ನ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಒಕ್ಕೂಟದಲ್ಲಿ 200 ಗ್ರಾಂ. ಹಾಗೂ 500 ಗ್ರಾಂ. ಮೊಸರು ಪಾಕೆಟ್‌ಗಳನ್ನು ತಯಾರಿಸಲಾಗುತ್ತದೆ. ಹೋದ ವರ್ಷ 3,500 ಕೆ.ಜಿ. ಇದ್ದ ಮೊಸರು ಬೇಡಿಕೆ ಪ್ರಮಾಣ 6ಸಾವಿರ ಕೆ.ಜಿ.ಗೆ ಏರಿಕೆಯಾಗಿದೆ. ಶೇ 47ರಷ್ಟು ಬೇಡಿಕೆ ಜಾಸ್ತಿಯಾಗಿದೆ. ಸರಾಸರಿ ಶೇ 25ರಿಂದ ಶೇ 27ರಷ್ಟು ಪ್ರಗತಿ ಇದೆ’.
‘ಒಕ್ಕೂಟಕ್ಕೆ ಸಹಕಾರ ಸಂಘಗಳಿಂದ ಪೂರೈಕೆಯಾಗುವ ಹಾಲಿನಲ್ಲಿ 1 ಲಕ್ಷ ಲೀಟರನ್ನು ವಿವಿಧ ಉತ್ಪನ್ನಗಳನ್ನು ಮಾಡುವುದಕ್ಕೆ ಬಳಸಲಾಗುತ್ತಿದೆ. ವೈಜ್ಞಾನಿಕವಾಗಿ ಸಂಸ್ಕರಣೆ ಹಾಗೂ ಶೇಖರಣೆ ಮಾಡುವುದರಿಂದ ಜನರಲ್ಲಿ ವಿಶ್ವಾಸವಿದೆ. ಹೀಗಾಗಿ, ಉತ್ಪನ್ನಗಳ ಖರೀದಿಯಲ್ಲಿ ಏರಿಕೆಯಾಗಿದೆ. ಬಿಸಿಲಿನ ಝಳ ಹೆಚ್ಚಾಗಿರುವುದೂ ಒಂದು ಕಾರಣವೆಂದು ಹೇಳಬಹುದು. ಮೇ ತಿಂಗಳಲ್ಲಿ ಬೇಡಿಕೆ ಪ್ರಮಾಣ ಶೇ 2ರಿಂದ ಶೇ 3ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.