ಬೆಳಗಾವಿ: ಹೊರವಲಯದ ಕಣಬರ್ಗಿ ಬಡಾವಣೆಯ ಬಸ್ ನಿಲ್ದಾಣ ಸಮೀಪವಿರುವ ‘ನಗರ ಕುಟುಂಬ ಕಲ್ಯಾಣ ಕೇಂದ್ರ’ವನ್ನು 25 ಹಾಸಿಗೆಗಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯ ಅಲ್ಲಿನ ಜನರದಾಗಿದೆ.
ಹಿಂದೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಆ ಭಾಗದ ಜನರಿಗೆ ಅನುಕೂಲ ಆಗಲೆಂದು ನಗರಪಾಲಿಕೆಯಿಂದ ಈ ಕೇಂದ್ರವನ್ನು (ಡಿಸ್ಪೆನ್ಸರಿ) ಸ್ಥಾಪಿಸಲಾಗಿತ್ತು. ಈ ಸ್ಥಳೀಯ ಸಂಸ್ಥೆಯಿಂದಲೇ ನಿರ್ವಹಿಸಲಾಗುತ್ತಿತ್ತು. 2008ರಲ್ಲಿ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇಲಾಖೆಯು ಅದನ್ನು ಸರ್ಕಾರೇತರ ಸಂಘ–ಸಂಸ್ಥೆಯಾದ ಮಹಿಳಾ ಕಲ್ಯಾಣ ಸಂಸ್ಥೆಗೆ ವಹಿಸಿದೆ. ವೈದ್ಯೆ, ನಾಲ್ವರು ಮಹಿಳಾ ಕಿರಿಯ ಆರೋಗ್ಯ ಸಹಾಯಕಿಯರು ಮತ್ತು ಒಬ್ಬರು ಎಫ್‌ಡಿಒ ಇದ್ದಾರೆ. ಹಿಂದಕ್ಕೆ ಹೋಲಿಸಿದರೆ ಈಗ ಆ ಭಾಗದಲ್ಲಿ ಜನಸಂಖ್ಯೆಯು ಜಾಸ್ತಿ ಆಗಿರುವುದರಿಂದ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎನ್ನುವುದು ಆ ಭಾಗದ ಜನರ ಬೇಡಿಕೆಯಾಗಿದೆ.
ಅನುಕೂಲವಾಗುತ್ತದೆ:
‘ಆ ಕಟ್ಟಡ ಈಗ ಶಿಥಿಲಾವಸ್ಥೆಯಲ್ಲಿದೆ. ಹಿಂಭಾಗದಲ್ಲಿ ಗಡಿಗಳು–ಬಳ್ಳಿಗಳು ಬೆಳೆದಿವೆ. ನಿರ್ವಹಣೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಸೌಲಭ್ಯಗಳು ಇಲ್ಲದಿರುವುದರಿಂದ ಹೆಚ್ಚಿನ ಆರೋಗ್ಯ ಸೇವೆ ಒದಗಿಸಲಾಗದ ಸ್ಥಿತಿಯಲ್ಲಿ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಇದ್ದಾರೆ. ಆದ್ದರಿಂದ ಜನರು ಖಾಸಗಿ ಕ್ಲಿನಿಕ್‌ಗಳಿಗೆ ಅಥವಾ ಹತ್ತು ಕಿ.ಮೀ. ದೂರದಲ್ಲಿರುವ ಜಿಲ್ಲಾಸ್ಪತ್ರೆಗೆ ಹೋಗಬೇಕಾಗಿದೆ. ಇಲ್ಲಿಯೇ ಅಗತ್ಯ ಚಿಕಿತ್ಸೆ ಸಿಕ್ಕಲ್ಲಿ ಜಿಲ್ಲಾಸ್ಪತ್ರೆ ಮೇಲಿನ ಒತ್ತಡವನ್ನೂ ಕಡಿಮೆ ಮಾಡಬಹುದು’ ಎನ್ನುತ್ತಾರೆ ನಿವಾಸಿಗಳು.
‘ಈ ಕೇಂದ್ರದಲ್ಲಿ ಮಧ್ಯಾಹ್ನದವರೆಗೆ ವೈದ್ಯರು ಇರುತ್ತಾರೆ. ಹಾಸಿಗೆಗಳ ವ್ಯವಸ್ಥೆ ಇಲ್ಲ. ಹೆಚ್ಚಿನ ಔಷಧಿಗಳು ಲಭ್ಯವಿಲ್ಲ. ಸದ್ಯಕ್ಕೆ ಕೋವಿಡ್ ಲಸಿಕೆ ನೀಡುವ ಕಾರ್ಯವಷ್ಟೆ ನಡೆಯುತ್ತಿದೆ. ಇಲ್ಲಿ ಹೆಚ್ಚಿನ ಆರೋಗ್ಯ ಸೇವೆ ದೊರೆತರೆ ಈ ಭಾಗದ ಬಡ, ಮಧ್ಯಮ ವರ್ಗದವರು ಹಾಗೂ ಸಮೀಪದ ಹಳ್ಳಿಗಳವರಿಗೂ ಅನುಕೂಲವಾಗುತ್ತದೆ’ ಎಂದು ಕಣಬರ್ಗಿ ನಿವಾಸಿ ಪ್ರಕಾಶ ಪಾಟೀಲ ಪ್ರತಿಕ್ರಿಯಿಸಿದರು.
ಅನುಮೋದನೆ ಪಡೆಯಬೇಕು:
‘ಆ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿಸಿದರೆ ಒಳ್ಳೆಯದೆ. ಅಲ್ಲಿ ಈಗಿರುವ ವೈದ್ಯೆ ಉತ್ತಮ ಸೇವೆ ನೀಡುತ್ತಿದ್ದಾರೆ. ಲಸಿಕಾಕರಣ ಮೊದಲಾದವು ನಡೆಯುತ್ತಿವೆ. ನಿವಾಸಿಗಳು ಶಾಸಕರು ಅಥವಾ ಸಂಸದರ ಮೂಲಕ ಪ್ರಸ್ತಾವ ಸಲ್ಲಿಸಿ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ ಹೇಳಿದರು.
‘ಹಾಲಿ ಕಟ್ಟಡ ಶಿಥಿಲಗೊಂಡಿದ್ದು, ಸೋರುತ್ತದೆ. ಕಿಟಕಿಗಳು ಹಾಳಾಗಿವೆ. ಸರಿಯಾದ ಹಾಸಿಗೆ ವ್ಯವಸ್ಥೆಯೂ ಇಲ್ಲ. ಸೌಲಭ್ಯಗಳಿಲ್ಲದೆ ಇರುವುದರಿಂದ ಹೆಚ್ಚಿನ ಜನರು ಬರುತ್ತಿಲ್ಲ. ಕೊರತೆಗಳನ್ನು ನಿವಾಸಿದರೆ ರೋಗಿಗಳಿಗೆ ಪ್ರಯೋಜನವಾಗುತ್ತದೆ’ ಎಂದು ನಿವಾಸಿ, ಮುಖಂಡ ಮುರುಗೇಂದ್ರಗೌಡ ಪಾಟೀಲ ಒತ್ತಾಯಿಸಿದರು.
‘ನಗರ ಹಾಗೂ ಬೆಳಗಾವಿ ತಾಲ್ಲೂಕಿನಲ್ಲಿ 11 ಲಕ್ಷಕ್ಕೂ ಜಾಸ್ತಿ ಜನಸಂಖ್ಯೆ ಇದೆ. ಇತರ ತಾಲ್ಲೂಕುಗಳಿಗೆ ಹೋಲಿಸಿದರೆ ಬೆಳಗಾವಿ ತಾಲ್ಲೂಕು ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯ ಕೊರತೆ ತೀವ್ರವಾಗಿದೆ. ಬಹುತೇಕರು ಜಿಲ್ಲಾಸ್ಪತ್ರೆಗೆ ಬರುತ್ತಾರೆ ಅಥವಾ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಅಲ್ಲಲ್ಲಿ 25 ಹಾಸಿಗೆಗಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ಜನಪ್ರತಿನಿಧಿಗಳು ಕ್ರಮ ವಹಿಸದಿರುವುದು ಸೋಜಿಗ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಮನವಿ ಸಲ್ಲಿಸಿದ್ದೇವೆ
ಆ ಕುಟುಂಬ ಕಲ್ಯಾಣ ಕೇಂದ್ರವನ್ನು 25 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅನುದಾನ ಕಲ್ಪಿಸುವಂತೆ ಒತ್ತಾಯಿಸಿ ಸಂಸದೆ ಮಂಗಲಾ ಅಂಗಡಿ ಅವರಿಗೆ ಮನವಿ ಸಲ್ಲಿಸಿದ್ದೇವೆ.
–ಮುರುಗೇಂದ್ರಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮಹಾನಗರ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.