ಬೆಳಗಾವಿ: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಬಳಕೆಯಾಗದೇ ಇರುವ ಹೆಚ್ಚುವರಿ ಡೆಸ್ಕ್‌ಗಳನ್ನು ಅಗತ್ಯವಿರುವ ಶಾಲೆಗಳಿಗೆ ನೀಡಿ, ಸದ್ಬಳಕೆ ಮಾಡುವ ‘ಡೆಸ್ಕ್ ಅಭಿಯಾನ’ ಆರಂಭಗೊಂಡಿದೆ.
ಡೆಸ್ಕ್‌ಗಳ ಕೊರತೆ ನೀಗಿಸಲು ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆಯು ಆರಂಭಿಸಿರುವ ಈ ಅಭಿಯಾನವು ಕೆಲ ಶಾಲೆಗಳಲ್ಲಿ ಡೆಸ್ಕ್‌ಗಳ ಕೊರತೆ ನೀಗಿಸಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮೀಕ್ಷೆ ನಡೆಸಿ, ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1,407, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 6,080 ಸೇರಿ 7,487 ಹೆಚ್ಚುವರಿ ಡೆಸ್ಕ್‌ಗಳಿವೆ ಎಂದು ಹೇಳಿದ್ದಾರೆ.
‘ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಹೆಚ್ಚುವರಿ ಆಗಿದ್ದ 1,407 ಡೆಸ್ಕ್ ಪೈಕಿ 1,007 ಡೆಸ್ಕ್‌ಗಳನ್ನು ಅಗತ್ಯವಿರುವ ಶಾಲೆಗಳಿಗೆ ಸ್ಥಳಾಂತರಿಸಿದ್ದೇವೆ. ಉಳಿದ ಡೆಸ್ಕ್‌ಗಳನ್ನು ಹಂತಹಂತವಾಗಿ ಸ್ಥಳಾಂತರಿಸುತ್ತೇವೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ಉಪನಿರ್ದೇಶಕಿ ಲೀಲಾವತಿ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೊದಲ ಹಂತದಲ್ಲಿ ಅಗತ್ಯ ಶಾಲೆಗಳಿಗೆ ಸ್ಥಳಾಂತರಿಸುತ್ತೇವೆ. ಇದರೊಂದಿಗೆ ಪ್ರೌಢಶಾಲೆಗಳಲ್ಲಿ ಹೊಸ ಡೆಸ್ಕ್‌ಗಳ ಖರೀದಿಗೂ ಟೆಂಡರ್ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಡೆಸ್ಕ್‌ಗಳ ಕೊರತೆ ತಗ್ಗಲಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಚಿಕ್ಕೋಡಿ ಪ್ರಭಾರ ಉಪನಿರ್ದೇಶಕ ಬಿ.ಎ.ಮೇಕಲಮರಡಿ ಹೇಳಿದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1,477 ಸರ್ಕಾರಿ ಶಾಲೆಗಳಿದ್ದು, 1.86 ಲಕ್ಷ ವಿದ್ಯಾರ್ಥಿಗಳಿದ್ದಾರೆ. 36,507 ಡೆಸ್ಕ್ ಲಭ್ಯ ಇವೆ. ಇವುಗಳನ್ನು ಹೊರತುಪಡಿಸಿ, 30,229 ಡೆಸ್ಕ್‌ಗಳ ಅಗತ್ಯವಿದೆ. ಚಿಕ್ಕೋಡಿಯಲ್ಲಿ 1,595 ಸರ್ಕಾರಿ ಶಾಲೆಗಳಿದ್ದು, 1.97 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. 37,823 ಡೆಸ್ಕ್ ಲಭ್ಯವಿವೆ. 24 ಸಾವಿರ ಡೆಸ್ಕ್‌ಗಳ ಅಗತ್ಯವಿದೆ.
ಜಿಲ್ಲೆಯಲ್ಲಿ ಹೆಚ್ಚುವರಿ ಮತ್ತು ಕಡಿಮೆ ಡೆಸ್ಕ್‌ಗಳಿರುವ ಶಾಲೆಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಹೆಚ್ಚುವರಿ ಡೆಸ್ಕ್‌ಗಳಿದ್ದರೆ, ಶೇ 20ರಷ್ಟು ಹೆಚ್ಚು ಉಳಿಸಿಕೊಂಡು ಉಳಿದವು ಸ್ಥಳಾಂತರಿಸಲಾಗುತ್ತದೆ.
‘ವಿದ್ಯಾರ್ಥಿಗಳ ಕೊರತೆಯಿಂದ ಕೆಲ ಶಾಲೆಗಳಲ್ಲಿ ಕೆಲವಷ್ಟು ಡೆಸ್ಕ್‌ಗಳು ಬಳಕೆ ಆಗುತ್ತಿರಲಿಲ್ಲ. ಅವು ಶಾಲೆಯ ಜಾಗ ಆಕ್ರಮಿಸಿಕೊಂಡಿದ್ದವು. ಇನ್ನೂ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಡೆಸ್ಕ್‌ಗಳ ಕೊರತೆ ಇತ್ತು. ಅದಕ್ಕೆ ಪರಿಹಾರ ಕಂಡುಕೊಳ್ಳಲು ಡೆಸ್ಕ್ ಅಭಿಯಾನ ಆರಂಭಿಸಿದೆವು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ‘ಪ್ರಜಾವಾಣಿ’ಗೆ ತಿಳಿಸಿದರು.
7 ಸಾವಿರ ಡೆಸ್ಕ್ ಹೊಸದಾಗಿ ಖರೀದಿಸಿದ್ದರೆ ₹4 ಕೋಟಿ ವೆಚ್ಚವಾಗುತ್ತಿತ್ತು. ಈ ಅಭಿಯಾನದಿಂದ ಅಷ್ಟು ಹಣ ಉಳಿದಿದೆರಾಹುಲ್ ಶಿಂಧೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಬೆಳಗಾವಿ
ಡೆಸ್ಕ್‌ಗಳನ್ನು ಯಥಾರೀತಿ ಸ್ಥಳಾಂತರಿಸುವುದಿಲ್ಲ. ಗ್ರಾಮ ಪಂಚಾಯಿತಿ ನೆರವಿನಿಂದ ದುರಸ್ತಿ ಮಾಡಿ ಬಣ್ಣ ಬಳಿದು ಕಳುಹಿಸುತ್ತೇವೆ.ಬಸವರಾಜ ಮಿಲ್ಲಾನಟ್ಟಿ ಉಪ ಸಮನ್ವಯಾಧಿಕಾರಿ ಸಮಗ್ರ ಶಿಕ್ಷಣ ಯೋಜನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.