ADVERTISEMENT

ವೈಚಾರಿಕತೆ ಬಿತ್ತುವ ಸಿನಿಮಾ ‘ಡಿಎಸ್‌ಎಸ್‌’

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:42 IST
Last Updated 11 ಜುಲೈ 2024, 15:42 IST
ಎ.ಆರ್.ಸಾಯಿರಾಮ್‌
ಎ.ಆರ್.ಸಾಯಿರಾಮ್‌   

ಬೆಳಗಾವಿ: ‘ಧೈರ್ಯಂ ಸರ್ವತ್ರ ಸಾಧನಂ (ಡಿಎಸ್‌ಎಸ್‌)’ ಎಂಬ ಚಲನಚಿತ್ರ ನಿರ್ದೇಶಿಸಿದ್ದೇನೆ. ಇದು ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿ ಗೆದ್ದ ಕಥಾ ಹಂದರ ಹೊಂದಿದೆ. ಪ್ರಗತಿಪರ ಸಂದೇಶ ನೀಡುವ ಚಿತ್ರವನ್ನು ನೋಡಿ ಗೆಲ್ಲಿಸಬೇಕು’ ಎಂದು ಚಲನಚಿತ್ರ ನಿರ್ದೇಶಕ ಎ.ಆರ್.ಸಾಯಿರಾಮ್‌ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮನುಷ್ಯ ಜಾತಿ ಪ್ರತಿಷ್ಠೆಗೆ ಬಿದ್ದಿದ್ದಾನೆ. ಜಾತಿ ಸಂಕೋಲೆಯಿಂದಾಗಿ ತಂದೆ– ಮಗ ಅನುಭವಿಸುವ ಕಷ್ಟ, ಹೋರಾಡಿ ಪಡೆಯುವ ಗೆಲುವನ್ನು ತೋರಿಸುವ ಸಿನಿಮಾ ಇದು. ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ ಆಧರಿಸಿ ಸಿನಿಮಾ ಮಾಡಿದ್ದೇವೆ. ಇದರಿಂದ ಜನರಿಗೆ ಹೆಚ್ಚು ಆಪ್ತವಾಗಲಿದೆ’ ಎಂದರು.

‘ಪ್ರಗತಿಪರ ಚಳವಳಿ, ಅಂಬೇಡ್ಕರ್ ಚಿಂತನೆ, ಕುವೆಂಪು, ತೇಜಸ್ವಿ ಅವರ ವಿಚಾರಗಳನ್ನೂ ಚಿತ್ರದಲ್ಲಿ ಬಳಸಿಕೊಂಡಿದ್ದೇನೆ. 60ರ ದಶಕದಲ್ಲಿ ನಡೆದ ಕತೆಯೊಂದನ್ನು ಆಧುನಿಕ ಪಲ್ಲಟಗಳಿಗೆ ಹೊರಳಿಸಿ ಚಿತ್ರಿಸಿದ್ದೇನೆ. ನಟ ವಿವಾನ್‌, ನಟಿ ಅನುಷಾ ಸೇರಿದಂತೆ ಎಲ್ಲ ಪಾತ್ರಧಾರಿಗಳೂ ಹೊಸಬರೇ ಇದ್ದಾರೆ’ ಎಂದರು.

ADVERTISEMENT

‘ಹೊಸ ನಿರ್ದೇಶಕರು ನಿರ್ದೇಶನ ಮಾಡುವ, ಸಾಮಾಜಿಕ ಕಥಾ ಹಂದರ ಹೊಂದಿದ ಚಲನಚಿತ್ರಗಳಿಗೆ ಥೇಟರ್‌ಗಳು ಸಿಗುತ್ತಿಲ್ಲ. ಓಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೂ ಸಮಸ್ಯೆಗಳಿವೆ. ಇದರಿಂದ ಯುವ ನಿರ್ದೇಶಕರು ಪ್ರತಿಭೆಯಿದ್ದರೂ ಅವಕಾಶ ವಂಚಿತರಾಗುತ್ತಿದ್ದಾರೆ. ಸಮುದಾಯ ಭವನಗಳಂಥ ಸಾಮಾಜಿಕ ವೇದಿಕೆಗಳಲ್ಲಿ ಪ್ರದರ್ಶನ ಮಾಡಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಚಿಂತಕ ಎಂ.ಗೋಪಿನಾಥ ಮಾತನಾಡಿ, ‘ತುಳಿತಕ್ಕೊಳಗಾದ ಸಮುದಾಯದವರ ಸಿನಿಮಾಗಳೂ ಕನ್ನಡದಲ್ಲಿ ಆಗಾಗ ಬಂದಿವೆ. ಆದರೆ, ತಾನು ದಲಿತ ಎಂದು ಹೇಳಿಕೊಂಡು ಬೆಳೆದ ನಾಯಕನಟ ಅಥವಾ ಪಾತ್ರ ಇಲ್ಲ. ಪ್ರಮುಖ ಪಾತ್ರ ದಲಿತನದ್ದಾಗಿದ್ದರೂ ತೇಲಿಸಿ ಪ್ರದರ್ಶಿಸಿದ ಉದಾಹರಣೆ ಇವೆ. ದಲಿತ ಬಂಡಾಯ ಚಳವಳಿ ಸಾಹಿತ್ಯದಲ್ಲಿ ಆದಂತೆ, ಸಿನಿಮಾದಲ್ಲೂ ಆಗಬೇಕಿದೆ’ ಎಂದರು.

ದಲಿತ ಚಳವಳಿಯ ಕಾರ್ಯಕರ್ತೆ ಜೀವನಲತಾ ನಡುವಿನಮನಿ ಮಾತನಾಡಿ, ‘ಬರೀ ಮನರಂಜನೆ ಮಾಡುವ ಸಿನಿಮಾಗಳಿಗಿಂತ ವೈಚಾರಿಕತೆ ಎತ್ತಿ ಹಿಡಿಯುವ ಯತ್ನಗಳು ಆಗಬೇಕಿದೆ’ ಎಂದರು.

ಸಾಹಿತಿ ಪ್ರೊ.ಶಿವರುದ್ರ ಕಲ್ಲೋಳಿಕರ ಮಾತನಾಡಿ, ‘ಹೊಸ ನಿರ್ದೇಶಕ, ಹೊಸ ನಟರ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.