ಬೆಳಗಾವಿ: ‘ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಖಾಸಗಿ ಕಾರಿಗೆ ಇಲ್ಲಿನ ಎನ್‌ಡಬ್ಲ್ಯುಕೆಆರ್‌ಟಿಸಿ 3ನೇ ಘಟಕದ ಡಿಪೊದಲ್ಲಿ ಡೀಸೆಲ್ ತುಂಬಿಕೊಟ್ಟಿದ್ದಕ್ಕೆ ಸಂಬಂಧಿಸಿದಂತೆ, ಇಂಧನ ಶಾಖೆಯಲ್ಲಿ ಕಿರಿಯ ಸಹಾಯಕ ಕಿಶೋರ ಬಿ.ಎಸ್. ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವ ಮುಂಜಿ ತಿಳಿಸಿದರು.
ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿಬ್ಬಂದಿಯ ಅಚಾತುರ್ಯದಿಂದ ಈ ಘಟನೆ ನಡೆದಿದೆ. ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಖಾಸಗಿ ವಾಹನಕ್ಕೆ ಡೀಸೆಲ್ ಹಾಕಿದ್ದಾರೆ. ಸಂಸ್ಥೆಯ ನಿಯಮಾವಳಿ ಪ್ರಕಾರ ಇಲ್ಲಿ ಖಾಸಗಿ ವಾಹನಕ್ಕೆ ಇಂಧನ ಪೂರೈಸುವುದು ಅಪರಾಧವಾಗಿರುತ್ತದೆ. 44 ಲೀಟಿರ್ ಡೀಸೆಲ್ ಹಾಕುವ ಮೂಲಕ ನೀವು ನಿಯಮಾವಳಿ ಉಲ್ಲಂಘಿಸಿದ್ದೀರಿ. ನಿಷ್ಕಾಳಜಿಯಿಂದ ಕಾರ್ಯನಿರ್ವಹಿಸಿ ಸಂಸ್ಥೆಯ ಘನತೆಗೆ ಕೆಟ್ಟ ಹೆಸರು ಬರುವಂತೆ ಮಾಡಿದ್ದೀರಿ. ಇದಕ್ಕೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಬಾರದೇಕೆ? 7 ದಿನಗಳ ಒಳಗೆ ಲಿಖಿತ ಉತ್ತರ ನೀಡುವಂತೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಡಿಪೊದಲ್ಲಿ ಹಾಕಿಸಿದ ಡೀಸೆಲ್‌ಗೆ ಆದ ಮೊತ್ತವನ್ನು (₹ 3,542) ಸಚಿವರು ತಮ್ಮ ಸಿಬ್ಬಂದಿಯ ಮೂಲಕ ಡೀಸೆಲ್ ತುಂಬಿಕೊಟ್ಟ ವ್ಯಕ್ತಿಗೆ ಕೊಟ್ಟಿದ್ದಾರೆ. ಅದನ್ನು ಅವರು ಡಿಪೊಗೆ ಪಾವತಿಸಿದ್ದಾರೆ. ಅವರು ನೋಟಿಸ್‌ಗೆ ವಿವರಣೆ ಕೊಟ್ಟ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಮುಂಜಿ ಸ್ಪಷ್ಟಪಡಿಸಿದರು.
ಶುಕ್ರವಾರ ಘಟಕದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಸಚಿವರು ಬಂದಿದ್ದ ವೇಳೆ, ಅವರ ಖಾಸಗಿ ಕಾರಿನ (ಕೆಎ 03 ಎನ್.ಎಫ್ 8989) ಚಾಲಕ ಅಲ್ಲಿನ ಡಿಪೊದಿಂದ ಇಂಧನ ಹಾಕಿಸಿಕೊಂಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಸಂಸ್ಥೆಯವರು ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.