ADVERTISEMENT

ಹಿಂದೂಗಳನ್ನು ರಕ್ಷಿಸುವ ಪಕ್ಷಗಳನ್ನು ಆಯ್ಕೆ ಮಾಡಿ: ದಿಲೀಪ ಪರಾಂಡೆ

​ಪ್ರಜಾವಾಣಿ ವಾರ್ತೆ
Published 19 ಮೇ 2024, 6:43 IST
Last Updated 19 ಮೇ 2024, 6:43 IST
<div class="paragraphs"><p>ದಿಲೀಪ ಪರಾಂಡೆ</p></div>

ದಿಲೀಪ ಪರಾಂಡೆ

   

ಬೆಳಗಾವಿ: ‘ಕರ್ನಾಟಕ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧೆಡೆ ಅಧಿಕಾರದಲ್ಲಿರುವ ಬಿಜೆಪಿ ಹೊರತಾದ ಪಕ್ಷಗಳು, ಮುಸ್ಲಿಂ ತುಷ್ಟೀಕರಣ ಮಾಡುತ್ತಿವೆ. ಹಾಗಾಗಿ ಎಲ್ಲ ರಾಜ್ಯಗಳಲ್ಲೂ ಹಿಂದೂಗಳ ರಕ್ಷಣೆ ಮಾಡುವ ಮತ್ತು ಹಿಂದುತ್ವ ಪ್ರತಿಪಾದಿಸುವ ಪಕ್ಷಗಳನ್ನು ಆಯ್ಕೆ ಮಾಡಬೇಕು’ ಎಂದು ವಿಶ್ವ ಹಿಂದೂ ಪರಿಷತ್‌ ಅಖಿಲ ಭಾರತೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ದಿಲೀಪ ಪರಾಂಡೆ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಮಾಡುತ್ತಿರುವ ಮುಸ್ಲಿಂ ತುಷ್ಟೀಕರಣದಿಂದ ಹಿಂದೂಗಳಿಗೆ ಅಪಾಯವಿದೆ. ಹಾಗಾಗಿ ಎಲ್ಲ ರಾಜ್ಯಗಳಲ್ಲೂ ಹಿಂದೂ ಪರವಾದ ಸರ್ಕಾರಗಳು ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕಿದೆ. ಹಿಂದೂಗಳ ಹಿತವೇ ದೇಶದ ಹಿತವಾಗಿದೆ’ ಎಂದರು.

ADVERTISEMENT

‘ಈಗ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮತದಾನ ಮುಗಿದಿದೆ. ಆದರೆ, ಇನ್ನೂ ಹಲವು ರಾಜ್ಯಗಳಲ್ಲಿ ಚುನಾವಣೆ ಮತದಾನ ಪ್ರಕ್ರಿಯೆ ನಡೆಯಬೇಕಿದೆ. ಅಂಥ ಕಡೆಗಳಲ್ಲಿ ಹಿಂದೂ ಪರವಾಗಿರುವವರಿಗೆ ಮತ ಹಾಕಬೇಕು. ಹಿಂದೂ ವಿರೋಧಿಗಳು ಸಂಸತ್ತಿಗೆ ಹೋಗಬಾರದು’ ಎಂದು ತಿಳಿಸಿದರು.

‘ಇಂದು ಕರ್ನಾಟಕದಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ನಡೆಯುತ್ತಿವೆ. ಗೋವುಗಳ ರಕ್ಷಣೆ ಮಾಡುವವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಸಾಧು-ಸಂತರು ಅಸುರಕ್ಷಿತವಾಗಿದ್ದಾರೆ. ಈ ಬಗ್ಗೆ ಹಿಂದೂ ಸಮುದಾಯದವರು ಯೋಚಿಸಬೇಕು. ಹಿಂದೂ ವಿರೋಧಿಗಳು ಅಧಿಕಾರ ಹಿಡಿದರೆ, ತಮ್ಮ ಪರಿಸ್ಥಿತಿ ಏನಾಗುತ್ತದೆ ಎಂದು ಗಂಭೀರವಾಗಿ ಚಿಂತಿಸಬೇಕು. ಹಿಂದೂ ಹಿತ ಗಮನದಲ್ಲಿಟ್ಟುಕೊಂಡೇ ಮತ ಚಲಾಯಿಸಬೇಕು’ ಎಂದು ಹೇಳಿದರು.

‘ಎಲ್ಲ ರಾಜ್ಯಗಳಲ್ಲೂ ಮತಾಂತರ ವಿರೋಧಿ ಕಾನೂನು ಜಾರಿಗೆ ಬರಬೇಕು’ ಎಂದು ಒತ್ತಾಯಿಸಿದ ಅವರು, ‘ಪೌರತ್ವ ತಿದ್ದುಪಡಿ ಕಾಯ್ದೆ–2019ರ(ಸಿಎಎ) ಕುರಿತು ಕಾಂಗ್ರೆಸ್‌ನವರು ಸುಳ್ಳು ಹೇಳಿ, ಮುಸ್ಲಿಮರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಆಪಾದಿಸಿದರು.

‘ದೇಶದಲ್ಲಿನ ಮಸೀದಿಗಳು ಮತ್ತು ಚರ್ಚ್‌ಗಳು ಸರ್ಕಾರಿ ವ್ಯವಸ್ಥೆ ಹಿಡಿತದಲ್ಲಿಲ್ಲ. ಆದರೆ, ದೇವಸ್ಥಾನಗಳು ಸರ್ಕಾರದ ಸುಪರ್ದಿಯಲ್ಲಿವೆ. ಅವುಗಳನ್ನು ಸರ್ಕಾರಿ ವ್ಯವಸ್ಥೆಯಿಂದ ಹೊರತರಬೇಕು. ಈಗ ದೇವಾಲಯಗಳಿಗೆ ಬರುತ್ತಿರುವ ಆದಾಯ ದೇವಾಲಯದ ಅಭಿವೃದ್ಧಿ ಮತ್ತು ಭಕ್ತರಿಗೆ ಸೌಕರ್ಯ ಕಲ್ಪಿಸಲು ಬಳಕೆಯಾಗಬೇಕು’ ಎಂದರು.

‘ನಮ್ಮ ಸಂಘಟನೆ ಸ್ಥಾಪನೆಯಾಗಿ 60 ವರ್ಷ ಸಂದಿವೆ. ಅದಕ್ಕಾಗಿ ಹಿಂದೂಗಳನ್ನು ಒಗ್ಗೂಡಿಸಲು ನಾನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಹೇಳಿದರು.

ಮುಖಂಡರಾದ ಶ್ರೀಕಾಂತ ಕದಂ, ಶಿವಕುಮಾರ ಬೋಳಶೆಟ್ಟಿ, ಪ್ರಮೋದಕುಮಾರ ವಕ್ಕುಂದಮಠ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.