ಬೆಳಗಾವಿ: ‘ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಈಗ ಇಬ್ಬರು ಮಹಿಳೆಯರಿಗೆ ವಿದ್ಯುತ್‌ಚಾಲಿತ ತ್ರಿಚಕ್ರ ವಾಹನ ವಿತರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ 25 ಮಹಿಳೆಯರಿಗೆ ವಿತರಿಸುವ ಗುರಿ ಇದೆ’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಇಲ್ಲಿ ಭಾನುವಾರ ವಿದ್ಯುತ್‌ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
‘ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿ ಇಂಥ ವಾಹನ ಪರಿಚಯಿಸಿದ್ದೇವೆ. ಎರಡೂ ವಾಹನಗಳ ಖರೀದಿಗೆ ತಗುಲಿದ ₹3.10 ಲಕ್ಷ ಮೊತ್ತವನ್ನು ನಾವೇ ಭರಿಸಿದ್ದೇವೆ. ಅವುಗಳನ್ನು ಚಲಾಯಿಸುವವರು ಆರು ವರ್ಷಗಳವರೆಗೆ ಪ್ರತಿದಿನ ₹100 ಭರಿಸಬೇಕು. ಶೂನ್ಯ ಬಡ್ಡಿದರದಲ್ಲಿ ಸಾಲ ಸೌಕರ್ಯ ಕಲ್ಪಿಸಲಾಗಿದೆ’ ಎಂದರು.
‘ಒಮ್ಮೆ 5 ತಾಸು ಚಾರ್ಜಿಂಗ್ ಮಾಡಿದರೆ, ಈ ವಾಹನ 100 ಕಿ.ಮೀ. ಸಂಚರಿಸಲಿದೆ. ಆರಂಭದಲ್ಲಿ ದಕ್ಷಿಣ ಕ್ಷೇತ್ರದಲ್ಲಷ್ಟೇ ಸಂಚರಿಸಲಿರುವ ಇವುಗಳಲ್ಲಿ ಪ್ರಯಾಣಿಕರು ಕಡಿಮೆ ಶುಲ್ಕ ನೀಡಿ ಸಂಚರಿಸಬಹುದು. ಈ ವಾಹನಗಳ ಬಳಕೆಯಿಂದ ಪರಿಸರ ಮಾಲಿನ್ಯವೂ ತಗ್ಗಲಿದೆ. ಮಹಿಳೆಯರಿಗೆ ವಾಹನ ಚಾಲನೆ ಕುರಿತು ತರಬೇತಿಯನ್ನೂ ಕೊಡುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.