ವೈವಿಧ್ಯಮಯ ವಿನ್ಯಾಸಗಳ ಆಕಾಶಬುಟ್ಟಿಗಳು ಬೆಳಗಾವಿ ಮಾರುಕಟ್ಟೆಯ ಬಣ್ಣವನ್ನು ಆಕರ್ಷಕಗೊಳಿಸಿದೆ. ತರಕಾರಿ, ಹಣ್ಣು–ಹಂಪಲುಗಳ ರಾಶಿ ಕಾಣಿಸುತ್ತಿದ್ದ ರಸ್ತೆಗಳಲ್ಲಿ ಏಕಾಏಕಿ ಕಾಮನಬಿಲ್ಲಿನಂಥ ಲೋಕ ಸೃಷ್ಟಿಯಾಗಿದೆ. ಆಲಂಕಾರಿಕ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಸಾಮಾನ್ಯ ಮಾರುಕಟ್ಟೆ ಈಗ ವರ್ಣರಂಜಿತ ರೂಪ ಪಡೆದು ಕಂಗೊಳಿಸುತ್ತಿದೆ.
ಜನರಿಂದ ಕಿಕ್ಕಿರಿದು ಸೇರಿರುವ ಮಾರುಕಟ್ಟೆಗೆ ಕಾಲಿಟ್ಟರೆ ಸಾಕು; ಹೂಮಾಲೆಗಳು, ನಕ್ಷತ್ರಗಳು, ಬಗೆಬಗೆಯ ವಿನ್ಯಾಸಗಳ ಆಭರಣಗಳು, ಬಟ್ಟೆಗಳು, ವಿದ್ಯುದ್ದೀಪಗಳು ಚುಂಬಕಶಕ್ತಿಯಂತೆ ಸೆಳೆಯುತ್ತಿವೆ.
ವರ್ಣರಂಜಿತ ಶಿವನಬುಟ್ಟಿಗಳಂತೂ ಒಂದಕ್ಕಿಂತ ಮತ್ತೊಂದು ಸುಂದರವಾಗಿವೆ. ಅವುಗಳ ಖರೀದಿಗೆ ಅಂಗಡಿಗೆ ಕಾಲಿಟ್ಟರೆ, ಯಾವುದನ್ನು ಖರೀದಿಸಬೇಕೆಂದು ಗ್ರಾಹಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಪ್ಲಾಸ್ಟಿಕ್ ಮಾತ್ರವಲ್ಲ; ಬಿದಿರು, ಕಾಗದ, ಕಟ್ಟಿಗೆ, ಬಟ್ಟೆಯಿಂದ ‘ಕಾರ್ತಿಕ ಬುಟ್ಟಿ’ಗಳೂ ಮಾರುಕಟ್ಟೆ ಆಕ್ರಮಿಸಿಕೊಂಡಿವೆ. ಪರಿಸರ ಸ್ನೇಹಿ ‘ಕಂದೀಲು’ಗಳು ಹೆಚ್ಚಾಗಿ ಜನರನ್ನು ಸೆಳೆಯುತ್ತಿವೆ.
ವಿವಿಧ ವಿನ್ಯಾಸ: ‘ನಾವು 17 ವರ್ಷಗಳಿಂದ ಆಕಾಶಬುಟ್ಟಿ ಮಾರುತ್ತಿದ್ದೇವೆ. ನಾಲ್ಕು ವರ್ಷಗಳಿಂದ ಇತ್ತೀಚೆಗೆ ವೈವಿಧ್ಯಮಯವಾದ ಉತ್ಪನ್ನ ಮಾರುಕಟ್ಟೆ ಪ್ರವೇಶಿಸುತ್ತಿವೆ. ಬಿದಿರಿನಲ್ಲಿ ನಾವೂ ತರಹೇವಾರಿ ಆಕಾಶಬುಟ್ಟಿ ಸಿದ್ಧಪಡಿಸುತ್ತಿದ್ದೇವೆ. ಕೋನ್, ಬೆಲ್ ಶೇಪ್, ದೀಪ, ತುಳಸೀಕಟ್ಟೆ, ಡೈಮಂಡ್, ಷಟ್ಕೋನ, ಸ್ವಸ್ತಿಕ್ ಆಕಾಶ, ನಕ್ಷತ್ರ, ಟ್ರಕ್, ವಿಮಾನ ಮಾದರಿ ಹೆಚ್ಚಾಗಿ ಬಿಕರಿಯಾಗುತ್ತಿವೆ. ₹250ರಿಂದ ₹1,800ರವರೆಗೆ ದರ ಇದೆ’ ಎಂದು ಬುರುಡ ಗಲ್ಲಿಯ ವ್ಯಾಪಾರಿ ಸಂಜಯ ತೆವರೆ ಹೇಳುತ್ತಾರೆ.
‘ಮಹಾರಾಷ್ಟ್ರ ಮತ್ತು ಖಾನಾಪುರದಿಂದ ಬಿದಿರು ತಂದು, ಒಂದೂವರೆ ಅಡಿಯಿಂದ 10–12 ಅಡಿಯವರೆಗಿನ ಆಕಾಶಬುಟ್ಟಿ ತಯಾರಿಸುತ್ತೇವೆ. ಆಕರ್ಷಣೀಯವಾದ ಒಂದು ಆಕಾಶಬುಟ್ಟಿ ಸಿದ್ಧವಾಗಲು ಎಂಟು ತಾಸು ಬೇಕಾಗುತ್ತದೆ. ಇಂದು ಚೀನಾದ ಉತ್ಪನ್ನಗಳೂ ಮಾರುಕಟ್ಟೆಗೆ ಬಂದಿವೆ. ಜನರು ಸಾಂಪ್ರದಾಯಿಕ ಉತ್ಪನ್ನಗಳಿಗಿಂತ, ವಿದೇಶಿ ಉತ್ಪನ್ನಗಳ ಆಕರ್ಷಣೆಗೆ ಮಾರು ಹೋಗುತ್ತಿದ್ದಾರೆ’ ಎಂದು ಬೇಸರಿಳಿಸುತ್ತಲೇ, ಬಿದಿರಿನಲ್ಲಿ ಆಕಾಶಬುಟ್ಟಿ ತಯಾರಿಕೆಯಲ್ಲಿ ನಿರತವಾದರು ಮತ್ತೊಬ್ಬ ವ್ಯಾಪಾರಿ ಮೋಹನ ಕೋರ್ಡೆ ಹೇಳಿದರು.
‘ಈ ವರ್ಷ ಜೂಟ್ ಬಟ್ಟೆ, ನೆಟ್ ಮತ್ತು ಆ್ಯಕ್ರಿಲಿಕ್ ಶೀಟ್ ಗಳಿಂದ ತಯಾರಿಸಿದ ವಿಶಿಷ್ಟ ಆಕಾಶಬುಟ್ಟಿ ಲಭ್ಯವಿವೆ. ಈಗ ಮಳೆಗಾಲವಿದೆ. ಎಷ್ಟೇ ನೀರು ಸಿಡಿದರೂ ಅವು ಬೇಗ ಹಾಳಾಗುವುದಿಲ್ಲ. ಕ್ರಿಸ್ಟಲ್ ಜೂಮರ್ಸ್ ಮಾದರಿಯಂತೂ ಎಲ್ಲರನ್ನೂ ಸೆಳೆಯುತ್ತಿದೆ. ಆಕಾಶಬುಟ್ಟಿಯಲ್ಲೂ ಈಗ ಹೊಸ ಟ್ರೆಂಡ್ ಶುರುವಾಗಿದೆ. ನನ್ನ ಕಡೆ ಏನಿಲ್ಲವೆಂದರೂ 50ಕ್ಕೂ ಅಧಿಕ ನಮೂನೆಯ ಆಕಾಶಬುಟ್ಟಿ ಇವೆ’ ಎಂದು ಪಾಂಗುಳ ಗಲ್ಲಿಯ ವರ್ತಕ ದೀಪಕ ಗೋಕಾಕ ಹೇಳುತ್ತ, ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ತೋರಿಸುವುದಕ್ಕೆ ಅಣಿಯಾದರು.
ಕರ್ನಾಟಕ ರಾಜ್ಯೋತ್ಸವದ ಹೊಸ್ತಿಲಲ್ಲಿ ಬೆಳಗಾವಿಯ ಮಾರುಕಟ್ಟೆ ಅಂಗಳದಲ್ಲಿ ಆಕಾಶಬುಟ್ಟಿಗಳ ಲೋಕವೇ ಅನಾವರಣಗೊಂಡಿದೆ. ಆಗಾಗ ಮಳೆಹನಿಗಳ ಸಿಂಚನದ ಮಧ್ಯೆಯೂ ‘ಬೆಳಗಾವಿ’ ಸಂತಸದಲ್ಲಿ ತೇಲುತ್ತಿದೆ.
ಈ ಹಿಂದೆ ಆಕಾಶಬುಟ್ಟಿಯಲ್ಲಿ ದೀಪವೊಂದು ಕಂಗೊಳಿಸುತ್ತಿತ್ತು. ಆದರೆ ಈಗ ದೇವರು ಮಹಾನ್ ನಾಯಕರು ಶರಣರು ಮತ್ತು ಚಲನಚಿತ್ರ ನಟರ ಫೋಟೊಗಳೂ ತೂಗುದೀಪಗಳಲ್ಲಿ ಸ್ಥಾನ ಪಡೆದಿವೆ. ನಾನಾ ಆಕಾರ ಮತ್ತು ಗಾತ್ರದ ಆಕಾಶಬುಟ್ಟಿಗಳಲ್ಲಿ ದುರ್ಗಾದೇವಿ ಮಹಾಲಕ್ಷ್ಮಿ ದೇವಿ ಸವದತ್ತಿಯ ಯಲ್ಲಮ್ಮ ದೇವಿ ಶ್ರೀರಾಮ ಹನುಮಂತ ಗಣೇಶ ವಿಠ್ಠಲ–ರುಕ್ಮಿಣಿ ರಾಧಾ–ಕೃಷ್ಣ ಶಿವಾಜಿ ಮಹಾರಾಜರು ಜಗಜ್ಯೋತಿ ಬಸವಣ್ಣನ ಭಾವಚಿತ್ರ ಅಳವಡಿಸಿದ್ದಾರೆ. ಸಿನಿಮಾಪ್ರಿಯರು ಪುನೀತ್ ರಾಜಕುಮಾರ್ ಚಿತ್ರ ಅಳವಡಿಸಿ ಅಭಿಮಾನ ಮೆರೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.