ADVERTISEMENT

Diwali 2024: ಬೆಳಕಿನ ಹಬ್ಬಕ್ಕೆ ‍ಪಗಡೆಯಾಟದ ಸಡಗರ

ಬಾಲಶೇಖರ ಬಂದಿ
Published 31 ಅಕ್ಟೋಬರ್ 2024, 5:33 IST
Last Updated 31 ಅಕ್ಟೋಬರ್ 2024, 5:33 IST
ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ದೀಪಾವಳಿ ಹಬ್ಬದ ಅಂಗವಾಗಿ ಪಗಡೆ ಆಟದಲ್ಲಿ ತಲ್ಲೀನರಾದ ಜನ
ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ದೀಪಾವಳಿ ಹಬ್ಬದ ಅಂಗವಾಗಿ ಪಗಡೆ ಆಟದಲ್ಲಿ ತಲ್ಲೀನರಾದ ಜನ   

ದೀಪಾವಳಿ ಹಬ್ಬ ಬರುತ್ತಿದ್ದಂತೆ ಮೂಡಲಗಿ ತಾಲ್ಲೂಕಿನ ಹಳ್ಳಿಗಳಲ್ಲಿ ಪಗಡೆ ಆಟ ಆಡುವುದಕ್ಕೆ ಸಜ್ಜಾಗುತ್ತಾರೆ. ದೀಪಾವಳಿಗೆ ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಪಗಡೆ ಆಟದ ಸಂಭ್ರಮ ತುಂಬಿಕೊಳ್ಳುತ್ತದೆ. ಕೈಯಲ್ಲಿ ಪಗಡೆ ಹಾಸು, ಕವಡೆ ಕಾಯಿಗಳನ್ನು ಹಿಡಿದುಕೊಂಡು ಗ್ರಾಮದ ಅಗಸಿ ಕಟ್ಟೆ, ಪಂಚಾಯಿತಿ ಕಟ್ಟೆ, ದೇವಸ್ಥಾನದ ಕಟ್ಟೆಗೋ ಹೊರಟರೆಂದರೆ ದೀಪಾವಳಿ ಮೈದುಂಬಿಕೊಂಡಿದೆ ಎಂದರ್ಥ.

ದೀಪಾವಳಿಯ ಸುತ್ತ ಐದು ದಿನಗಳ ವರೆಗೆ ಪಗಡೆ ಆಟದ ರಂಗು ಏರುತ್ತದೆ. ಊರುಗಳಲ್ಲಿ ಆಕಾಶಬುಟ್ಟಿ ಮತ್ತು ಹಣತೆಗಳ ಬೆಳಕಿನ ಸಂಭ್ರಮ ಒಂದೆಡೆಯಾದರೆ ದೀಪದ ಬೆಳಕಿನ ಅಡಿಯಲ್ಲಿ ಪಗಡೆ ಆಡುವವರ ಸಂಭ್ರಮ ಇನ್ನೊಂದೆಡೆ ಇರುತ್ತದೆ. ಮೂಡಲಗಿ ತಾಲ್ಲೂಕಿನಲ್ಲಿ ಪ್ರಮುಖವಾಗಿ ಕುಲಗೋಡ, ಯಾದವಾಡ, ಮಸಗುಪ್ಪಿ, ಅವರಾದಿ, ಕಮಲದಿನ್ನಿ, ಶಿವಾಪುರ, ಢವಳೇಶ್ವರ, ಹುಣ್ಯಶಾಳ ಪಿವೈ, ಖಾನಟ್ಟಿ, ಫುಲಗಡ್ಡಿ, ವೆಂಕಟಾಪುರ, ಬೀಸನಕೊಪ್ಪ ಗ್ರಾಮಗಳಲ್ಲಿ ದೀಪಾವಳಿ ಹಬ್ಬದ ದಿನಗಳ ರಾತ್ರಿ ಪಗಡೆ ಆಟದ ಸಂಭ್ರಮದ ಜೋರಾಗಿರುತ್ತದೆ.

ಪೌರಾಣಿಕ ಕಥೆ: ಮಹಾಭಾರತದಲ್ಲಿ ಕೌರವರು ಪಾಂಡವರನ್ನು ಪಗಡೆ ಆಟದಲ್ಲಿ ಸೋಲಿಸಿ ಅವರ ಸರ್ವಸ್ವವನ್ನು ಕಿತ್ತುಕೊಂಡು ಅರಣ್ಯಕ್ಕೆ ಸಾಗಹಾಕುವರು. ಧರ್ಮದಿಂದ ಕೌರವರ ಮೇಲೆ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಪಗಡೆ ಕಲ್ಪನೆಯನ್ನು ಜನಪದೀಯವಾಗಿ ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಾಗಿ ಅದು ಇಂದಿಗೂ ಪಗಡೆ ಆಡುವ ಪರಂಪರೆ ಹಳ್ಳಿ, ಹಳ್ಳಿಗಳಲ್ಲಿ ನಡೆದುಕೊಂಡು ಬಂದಿದೆ. ಹಣಕ್ಕಾಗಿ ಆಡದೆ ಸೋಲು, ಗೆಲುವು ಮಾತ್ರ ಇದ್ದು ಎಲ್ಲರೂ ಮನರಂಜನೆಯಾಗಿ ಸಂಭ್ರಮಿಸುತ್ತಾರೆ. ಇಲ್ಲಿ ಕುತಂತ್ರ ಹೆಣೆಯುವ ಶಕುನಿಗಳಿಗೆ ಪಗಡೆ ಆಟದಲ್ಲಿ ಅವಕಾಶ ಇರುವುದಿಲ್ಲ, ಸತ್ಯ, ಧರ್ಮದಿಂದ ಆಡುವುದು ಧರ್ಮರಾಜರಿಗೆ ಆಟದಲ್ಲಿ ಅವಕಾಶ ಇರುವುದು ಆಟದ ವಿಶೇಷವಾಗಿದೆ.

ADVERTISEMENT

ಹಲವು ಗ್ರಾಮಗಳಲ್ಲಿ ದಸರಾ ಹಬ್ಬದ ಬನ್ನಿ ಕೊಡುವ ದಿನದ ರಾತ್ರಿ ಪಗಡೆ ಪಟ್ಟಾವನ್ನು ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ಆಟ ಪ್ರಾರಂಭಿಸಿ ದೀಪಾವಳಿ ಅಮಾವಾಸ್ಯೆಯವರೆಗೆ ಇಲ್ಲವೆ ಕಡೇಪಾಡ್ಯಕ್ಕೆ ಮುಗಿಸುತ್ತಾರೆ.

ಇನ್ನು ಕೆಲವು ಗ್ರಾಮಗಳಲ್ಲಿ ತುಳಸಿ ಲಗ್ನಕ್ಕೆ ಇಲ್ಲವೆ ಗೌರಿ ಹುಣ್ಣಿಮೆವರೆಗೆ ಮುಂದುವರಿಸುತ್ತಾರೆ. ಕೆಲವು ಊರುಗಳಲ್ಲಿ ದೀಪಾವಳಿ ಪಾಡ್ಯ ರಾತ್ರಿ ಮತ್ತು ಕಡೇಪಾಡ್ಯ ರಾತ್ರಿಯಂದು ಒಂದೇ ದಿನ ಆಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ.

‘ಮಸಗಪ್ಪಿಯಲ್ಲಿ ಮಾನಮಿಗೆ ಪಗಡಿ ಪಟ್ಟಾ ಪೂಜೆ ಮಾಡಿ ಚಾಲೂ ಮಾಡುತ್ತೇವೆ. ತುಳಿಸಿ ಲಗ್ನದ ದಿವಸ ಮುಗಿಸುತ್ತೇವ್‌ರಿ’ ಎಂದು ಮಸಗುಪ್ಪಿಯ ರವಿ ಬಾಳಪ್ಪ ಕೊಳವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಮ್ಮ ಅಜ್ಜ ಆಡುತ್ತಿದ್ದರಿ. ನಾನು ಕಲಿತು ಆಡತ್ತಿದ್ದೇನೆ. ದೀಪಾವಳಿ ಸುತ್ತ ರಾತ್ರಿ 20ರಿಂದ 30 ಜನರ ಸೇರಿತೇವರಿ’ ಎಂದರು.

ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಪಗಡೆ ಸ್ಪರ್ಧೆಗಳು ಈಗಲೂ ಯಥೇಚ್ಛವಾಗಿ ನಡೆದುಕೊಂಡು ಬಂದಿವೆ. ರಾಜ್ಯ, ರಾಷ್ಟ್ರ ಮಟ್ಟದ ಪಗಡೆ ಸ್ಪರ್ಧೆಗಳನ್ನು ಏರ್ಪಡಿಸಿ ಗೆದ್ದ ತಂಡಗಳಿಗೆ ₹25 ಸಾವಿರದಿಂದ ಹಿಡಿದು ₹50 ಸಾವಿರ ನಗದು ಬಹುಮಾನ ಮತ್ತು ಬೈಕ್‌, ಚಿನ್ನದ ಸರ ಬಹುಮಾನಗಳನ್ನು ನೀಡುವುದು ವಿಶೇಷವಾಗಿದೆ. ಹೀಗಾಗಿ ಯುವಕರು ಸಹ ಪಗಡೆ ಆಟಕ್ಕೆ ಮಾರುಹೋಗಿದ್ದು, ಸ್ಪರ್ಧೆಗಾಗಿ ಆಡುವ ತಂಡಗಳು ಕೆಲವು ಗ್ರಾಮಗಳಲ್ಲಿ ಇವೆ.

ಬಹಳ ವರ್ಷಗಳಿಂದ ಮಸಗುಪ್ಪಿಯಲ್ಲಿ ದೀಪಾವಳಿಗೆ ಪಗಡೆ ಆಡುವುದು ರೂಢಿ. ರಾತ್ರಿ 9ರ ನಂತರ ಆಟ ಶುರುವಾದರೆ ನಸುಕಿನ 1 ಗಂಟೆಯವರೆಗೂ ಆಡುತ್ತೇವೆ
ರಾಚಪ್ಪ ಯಕ್ಕುಂಡಿ ಮಸಗುಪ್ಪಿ ಹಿರಿಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.