ಬೆಳಗಾವಿ: ‘ರೈತರಿಂದ ಸಾಲ ವಸೂಲಿ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಸೂಚಿಸಿದರು.
ಇಲ್ಲಿ ಮಂಗಳವಾರ ನಡೆದ ಬ್ಯಾಂಕ್‌ಗಳ ವ್ಯವಸ್ಥಾಪಕರು ಹಾಗೂ ರೈತ ಮುಖಂಡರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪ್ರಕರಣ ನ್ಯಾಯಾಲಯದಲ್ಲಿದ್ದರೆ, ಪ್ರವಾಹದ ಹಿನ್ನೆಲೆಯಲ್ಲಿ ಅವುಗಳನ್ನೂ ಸ್ಥಗಿತಗೊಳಿಸುವಂತೆ ವಕೀಲರ ಮೂಲಕ ನ್ಯಾಯಾಲಯಕ್ಕೆ ಕೋರಬೇಕು. ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‌ಗಳು, ಸಾಲ ಮನ್ನಾ ಅರ್ಹತೆ ಹೊಂದಿರುವ ರೈತರ ವಿರುದ್ಧದ ಪ್ರಕರಣಗಳನ್ನು ಸ್ಥಗಿತಗೊಳಿಸಬೇಕು’ ಎಂದು ಎಂದು ತಾಕೀತು ಮಾಡಿದರು.
ಭಯಪಡಬೇಡಿ:
‘ಸಾಲ ವಸೂಲಾತಿ ನೋಟಿಸ್ ಅಥವಾ ವಾರಂಟ್ ಬಂದರೆ ಭಯಪಡುವ ಅಗತ್ಯವಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ ಕಾನೂನು ನೆರವು ನೀಡಲಾಗುವುದು’ ಎಂದು ತಿಳಿಸಿದರು.
‘ಸಾಲ ನೀಡುವಾಗ ಕೆಲವು ಖಾಸಗಿ ಬ್ಯಾಂಕ್‌ಗಳು ಖಾಲಿ ಚೆಕ್ ಪಡೆಯುವಂತಿಲ್ಲ. ಮುಂದಿನ ದಿನಾಂಕ ನಮೂದಿಸಿ ಚೆಕ್ ಪಡೆಯುವ ಪದ್ಧತಿ ಇದೆ. ನಿಯಮ ಉಲ್ಲಂಘಿಸಿ ಖಾಲಿ ಚೆಕ್ ಪಡೆದರೆ ಕ್ರಮ ವಹಿಸಲಾಗುವುದು. ಖಾಸಗಿ ಬ್ಯಾಂಕುಗಳು ತಮ್ಮ ನ್ಯಾಯಾಲಯ ಪರಿಮಿತಿಯನ್ನು ರಾಜ್ಯದಲ್ಲಿ ನಿಗದಿಗೊಳಿಸಬೇಕು’ ಎಂದರು.
ಪ್ರಕ್ರಿಯೆ ಸರಳೀಕರಣಕ್ಕೆ ಸೂಚನೆ:
‘ಸಾಲ ವಿತರಣೆಗೆ ಸಂಬಂಧಿಸಿದ ದಾಖಲಾತಿಗಳನ್ನು (ಲೋನ್ ಡಾಕ್ಯುಮೆಂಟ್) ಕಡ್ಡಾಯವಾಗಿ ಕನ್ನಡದಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ನೀಡುವ ಪ್ರಕ್ರಿಯೆಯಲ್ಲಿ ವಿಳಂಬ ಆಗುತ್ತಿರುವುದರಿಂದ ಜನರು ಅನಿವಾರ್ಯವಾಗಿ ಖಾಸಗಿ ಬ್ಯಾಂಕ್‌ಗಳ ಮೊರೆ ಹೋಗುತ್ತಾರೆ. ಹೀಗಾಗಿ, ರಾಷ್ಟ್ರೀಕೃತ ಬ್ಯಾಂಕುಗಳು ಪ್ರಕ್ರಿಯೆ ಸರಳಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.
‘ಸಾಲ ವಸೂಲಾತಿ ಏಜೆನ್ಸಿಗಳ ಪೂರ್ವಾಪರ ಪರಿಶೀಲಿಸಿ ನೇಮಿಸಿಕೊಳ್ಳಬೇಕು. ವಸೂಲಿ ನೆಪದಲ್ಲಿ ಗೂಂಡಾವರ್ತನೆ ಅಥವಾ ದೌರ್ಜನ್ಯ ಸಹಿಸಿಕೊಳ್ಳುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
ಬದುಕು ಕಟ್ಟಿಕೊಳ್ಳಲು ನೆರವಾಗಿ:
‘ರೈತರು ಸಂಕಷ್ಟದಲ್ಲಿದ್ದು, ಸಾಲ ವಸೂಲಾತಿಗೆ ಒತ್ತಡ ಹಾಕಬಾರದು. ಸಾಲ ಹೊಂದಾಣಿಕೆ ಮಾಡಬಾರದು ಹಾಗೂ ಕಾಲಾವಕಾಶ ನೀಡಬೇಕು ಎಂದು ರಾಜ್ಯಮಟ್ಟದ ಬ್ಯಾಂಕರ್ ಸಭೆಯಲ್ಲೂ ತಿಳಿಸಲಾಗಿದೆ. ಹಿಂದೆಂದೂ ಕಂಡರಿಯದ ಪ್ರವಾಹದಿಂದ ಭಾರಿ ನಷ್ಟವಾಗಿದೆ. ರೈತರು, ವ್ಯಾಪಾರಿಗಳು, ನೇಕಾರರು ಸಂಕಷ್ಟದಲ್ಲಿದ್ದಾರೆ. ಅವರು ಬದುಕು ಕಟ್ಟಿಕೊಳ್ಳಲು ನೆರವಾಗಬೇಕು’ ಎಂದು ತಿಳಿಸಿದರು.
‘ಪರಿಹಾರ ಕೇಂದ್ರಗಳಿಗೆ ತೆರಳಿ ಕೆಲವು ಮೈಕ್ರೋ ಫೈನಾನ್ಸ್‌ನವರು ಸಾಲ ವಸೂಲಾತಿಗೆ ಯತ್ನಿಸಿದ್ದಾರೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನೋಟಿಸ್ ಕೂಡ ನೀಡಬಾರದು. ಮಾನವೀಯತೆಗೆ ಆದ್ಯತೆ ನೀಡಬೇಕು. ನಂತರ ಕಾನೂನು ಕ್ರಮಕ್ಕೆ ಮುಂದಾಗಬೇಕು’ ಎಂದರು.
‘ಬ್ಯಾಂಕ್ ಸಿಬ್ಬಂದಿ ನಿಯಮಾವಳಿ ಪ್ರಕಾರ ಕನ್ನಡ ಕಲಿತುಕೊಳ್ಳಬೇಕು. ಹಳ್ಳಿಗಳಲ್ಲೂ ಕನ್ನಡ ಬಲ್ಲವರನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಬೆಳೆಸಾಲ ಅಲ್ಲ; ಬೆಳೆ ಸಹಾಯಧನ:
‘ಬೆಳೆ ಸಾಲವನ್ನು ‘ಬೆಳೆ ಸಹಾಯಧನ’ ಹಾಗೂ ಕೃಷಿ ಸಾಲವನ್ನು ‘ಕೃಷಿ ಸಹಾಯಧನ’ ಎಂದು ಪರಿಗಣಿಸಬೇಕು’ ಎಂದು ರೈತ ಮುಖಂಡರು ಸಲಹೆ ನೀಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಮಾತನಾಡಿ, ‘ಬ್ಯಾಂಕ್‌ಗಳು ಮರುಪಾವತಿ ಸಾಮರ್ಥ್ಯ ಆಧರಿಸಿ ಸಾಲ ವಸೂಲಿಗೆ ಮುಂದಾಗಬೇಕು. ಖಾಲಿ ಚೆಕ್ ಇಟ್ಟುಕೊಂಡು ಹೆದರಿಸುವುದು, ನೋಟಿಸ್ ನೀಡುವುದು ಮಾಡುವಂತಿಲ್ಲ’ ಎಂದು ಸ್ಪಷ್ಟಪಡಿಸಿದರು.
ನಗರ ಪೊಲೀಸ್ ಆಯುಕ್ತ ಬಿಎಸ್. ಲೋಕೇಶ್ ಕುಮಾರ್, ಎಸ್ಪಿ ಲಕ್ಷ್ಮಣ ನಿಂಬರಗಿ, ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಖಾಶಿ, ಆರ್‌ಟಿಒ ಶಿವಾನಂದ ಮಗದುಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.