ADVERTISEMENT

ಬರ ನಿರ್ವಹಣೆ | ನಿಮಗೆ ಜವಾಬ್ದಾರಿ ಇಲ್ವೇ: ಸಿಎಂ ಸಿದ್ದರಾಮಯ್ಯಗೆ ಸಂಕನೂರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 15:52 IST
Last Updated 9 ಮಾರ್ಚ್ 2024, 15:52 IST
ಎಸ್‌.ವಿ. ಸಂಕನೂರ, ವಿಧಾನ ಪರಿಷತ್‌ ಸದಸ್ಯ 
ಎಸ್‌.ವಿ. ಸಂಕನೂರ, ವಿಧಾನ ಪರಿಷತ್‌ ಸದಸ್ಯ    

ಬೆಳಗಾವಿ: ‘ರಾಜ್ಯದಲ್ಲಿ ತಲೆದೋರಿದ ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ. ಬರ ನಿರ್ವಹಣೆಗೆ ಕೇಂದ್ರ ಅನುದಾನ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಾದರೆ ಈ ವಿಚಾರದಲ್ಲಿ ನಿಮಗೆ ಜವಾಬ್ದಾರಿ ಇಲ್ಲವೇ?’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಪ್ರಶ್ನಿಸಿದರು.

‘ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಕೊಡುತ್ತಿಲ್ಲ’ ಎಂಬ ಕಾಂಗ್ರೆಸ್‌ನವರ ಆರೋಪಕ್ಕೆ, ಇಲ್ಲಿ ಶನಿವಾರ ಅವರು ಹೀಗೆ  ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲಿ ಇದೇ ಮೊದಲ ಸಲವೇನೂ ಬರ ಬಂದಿಲ್ಲ. ಈ ಹಿಂದೆಯೂ ಬರ ಪರಿಸ್ಥಿತಿ ಇತ್ತು. ಐದು ವರ್ಷಗಳ ಹಿಂದೆ ಇಡೀ ರಾಜ್ಯ ಪ್ರವಾಹದಿಂದ ತತ್ತರಿಸಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಕೇಂದ್ರದ ಅನುದಾನಕ್ಕಾಗಿ ಕಾಯದೆ, ನೆರೆ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಅನುದಾನ ಕೊಟ್ಟರು. ನಂತರ ಕೇಂದ್ರ ಅನುದಾನ ಕೊಟ್ಟಿತು. ಈಗ ಸಿದ್ದರಾಮಯ್ಯ ಅವರು ಅನುದಾನ ಕೊಡಲಿ. ನಂತರ ಕೇಂದ್ರದಿಂದ ಬರಲಿದೆ. ಬರ ಪರಿಸ್ಥಿತಿ ನಿಭಾಯಿಸಲಾಗದಿದ್ದರೆ ರಾಜೀನಾಮೆ ಕೊಡಿ’ ಎಂದು ಒತ್ತಾಯಿಸಿದರು.

ADVERTISEMENT

‘ನರೇಗಾ ಯೋಜನೆಯಡಿ ದುಡಿಯುತ್ತಿರುವ ಕೂಲಿಕಾರರ ಮೂರು ತಿಂಗಳ ಬಾಕಿ ವೇತನ ಶೀಘ್ರ ಬಿಡುಗಡೆಯಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿರು.

‘ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರದ ಗದ್ದುಗೆಯೇರಿದ ಕಾಂಗ್ರೆಸ್‌ ಸರ್ಕಾರ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ದೇಶದ್ರೋಹಿ ಚಟುವಟಿಕೆ ಹೆಚ್ಚಿವೆ’ ಎಂದು ದೂರಿದರು.

ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ, ‘ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನುದಾನ ಕೊಡುತ್ತಿಲ್ಲ ಎಂದು ಕಾಂಗ್ರೆಸ್‌ನವರು ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನಿಯಮಾನುಸಾರ ಅನುದಾನ ಕೊಡುತ್ತಿದೆ. ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಮನಮೋಹನ್‌ಸಿಂಗ್‌ ನೇತೃತ್ವದ ಸರ್ಕಾರ 2004ರಿಂದ 2014ರ ಅವಧಿಯಲ್ಲಿ ರಾಜ್ಯಕ್ಕೆ ₹81 ಸಾವಿರ ಕೋಟಿ ಅನುದಾನ ಕೊಟ್ಟಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಿಂದ ಈವರೆಗೆ ₹2.85 ಲಕ್ಷ ಕೋಟಿ ಕೊಟ್ಟಿದೆ. ಯುಪಿಎ ಸರ್ಕಾರಕ್ಕಿಂತ ದುಪ್ಪಟ್ಟು ಹಣ ಈಗ ಕೊಡಲಾಗಿದೆ. ಆದರೆ, ಕಾಂಗ್ರೆಸ್‌ನವರು ನಿರಾಧಾರವಾಗಿ ಆರೋಪಿಸುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.