ADVERTISEMENT

ಬೆಳಗಾವಿ: ಅನಾಥ ಪ್ರಾಣಿಗಳ ‘ವೈದ್ಯ’ನಾಥ

ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಮೃತಪಡುವ ಪ್ರಾಣಿಗಳ ಅಂತ್ಯಸಂಸ್ಕಾರ ನಡೆಸುವ ಡಾ.ಮಹಾಂತೇಶ

ಇಮಾಮ್‌ಹುಸೇನ್‌ ಗೂಡುನವರ
Published 1 ಜುಲೈ 2024, 8:28 IST
Last Updated 1 ಜುಲೈ 2024, 8:28 IST
ಅಪಘಾತಕ್ಕೀಡಾಗಿ ಮೃತಪಟ್ಟಿದ್ದ ನಾಯಿಯನ್ನು ಡಾ.ಮಹಾಂತೇಶ ರಾಮಣ್ಣವರ ರಸ್ತೆಬದಿಗೆ ಒಯ್ಯುತ್ತಿರುವುದು
ಅಪಘಾತಕ್ಕೀಡಾಗಿ ಮೃತಪಟ್ಟಿದ್ದ ನಾಯಿಯನ್ನು ಡಾ.ಮಹಾಂತೇಶ ರಾಮಣ್ಣವರ ರಸ್ತೆಬದಿಗೆ ಒಯ್ಯುತ್ತಿರುವುದು   

ಬೆಳಗಾವಿ: ‘ಬೈಲಹೊಂಗಲದಿಂದ ಮಹಾಲಿಂಗಪುರಕ್ಕೆ ಕಾರಿನಲ್ಲಿ ಹೊರಟಿದ್ದೆ. ನಾಯಿ ಅಪಘಾತಕ್ಕೀಡಾಗಿ ರಸ್ತೆಯಲ್ಲೇ ಮೃತಪಟ್ಟಿತ್ತು. ಸ್ವಲ್ಪ ದೂರದಲ್ಲೇ ರಸ್ತೆಬದಿ ಮಗುವೊಂದು ಶೌಚಕ್ಕೆ ಕುಳಿತಿತ್ತು. ಈ ಮಾರ್ಗದಲ್ಲಿ ವೇಗವಾಗಿ ಬಂದ ವಾಹನವೊಂದು ನಾಯಿಯನ್ನು ತಪ್ಪಿಸಿ ಮುಂದೆ ಸಾಗಿತು. ನಿಯಂತ್ರಣ ಕಳೆದುಕೊಂಡು ಮಗುವಿಗೆ ಡಿಕ್ಕಿ ಹೊಡೆಯುವುದು ಸ್ವಲ್ಪದರಲ್ಲೇ ತಪ್ಪಿತು. ಆಗ ರಸ್ತೆಯಲ್ಲಿ ಅ‍‍ಪಘಾತಕ್ಕೀಡಾದ ಪ್ರಾಣಿ–ಪಕ್ಷಿ ತಪ್ಪಿಸಲು ಹೋಗಿ ಎಷ್ಟು ಅವಘಡ ಸಂಭವಿಸಬಹುದೆಂಬ ಆಲೋಚನೆ ಬಂತು. ಅಂದಿನಿಂದ ನಾನು ಹೋಗುವ ರಸ್ತೆಯಲ್ಲಿ ಯಾವುದೇ ಪ್ರಾಣಿ–ಪಕ್ಷಿ ಸತ್ತುಬಿದ್ದಿದ್ದರೂ ತೆರವುಗೊಳಿಸುತ್ತೇನೆ. ಸಮಯವಿದ್ದಾಗ ಅಂತ್ಯಕ್ರಿಯೆಯನ್ನೂ ಮಾಡುತ್ತೇನೆ’

ಇದು ಶಹಾಪುರದ ಕೆಎಲ್‌ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ಅವರ ನುಡಿ.

ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ 2008ರಲ್ಲಿ ಸ್ವತಃ ತಮ್ಮ ತಂದೆಯ ಮೃತ ಶರೀರವನ್ನೇ ಛೇದಿಸಿದ್ದ ಅವರು, ಈಗ ದೇಹದಾನದ ಮಹತ್ವದ ಬಗ್ಗೆ ರಾಜ್ಯದಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮಧ್ಯೆ, ತಾವು ಸಂಚರಿಸುವ ಮಾರ್ಗದಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪುವ ಪ್ರಾಣಿ–ಪಕ್ಷಿಗಳನ್ನು ಅಲ್ಲಿಂದ ತೆಗೆದು, ಸಂಭವನೀಯ ಅಪಘಾತ ತಪ್ಪಿಸುತ್ತಿದ್ದಾರೆ.

‘ನನ್ನ ಕಾರಿನಲ್ಲಿ ಕೈಗವಸು, ಫೇಸ್‌ಮಾಸ್ಕ್‌, ಆ್ಯಂಟಿಸೆಫ್ಟಿಕ್‌ ಲೋಷನ್‌ ಸದಾ ಇರುತ್ತವೆ. ನಾನು ತೆರಳುವ ರಸ್ತೆಯಲ್ಲಿ ನಾಯಿ, ಬೆಕ್ಕು, ಕತ್ತೆಕಿರುಬ, ನರಿ, ಮೊಲ, ಹಾವು, ಕಾಗೆ ಮೃತಪಟ್ಟಿದ್ದರೆ, ವಾಹನ ನಿಲ್ಲಿಸಿ ಅವುಗಳನ್ನು ದೂರಕ್ಕೆ ಒಯ್ದಿಡುತ್ತೇನೆ. ಬಿಡುವಿದ್ದರೆ ನಾನೇ ತಗ್ಗು ತೋಡಿಸಿ, ಅಂತ್ಯಕ್ರಿಯೆ ಮಾಡುತ್ತೇನೆ. ಇಲ್ಲದಿದ್ದರೆ ಸ್ಥಳೀಯರು, ರೈತರಿಗೆ ಅಂತ್ಯಕ್ರಿಯೆ ಮಾಡುವಂತೆ ತಿಳಿಸಿ ಹೋಗುತ್ತೇನೆ’ ಎಂದು ಮಹಾಂತೇಶ ಹೇಳಿದರು.

ADVERTISEMENT

ಪ್ರಥಮ ಚಿಕಿತ್ಸೆ:

‘ಕೆಲವೊಮ್ಮೆ ಅಪಘಾತಕ್ಕೀಡಾದ ಪ್ರಾಣಿಗಳು ಗಾಯಗೊಂಡು ನರಳುತ್ತಿರುತ್ತವೆ. ಆಗ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತೇನೆ. ರಸ್ತೆಯಲ್ಲೇ ಜೀವಬಿಟ್ಟ 300ಕ್ಕೂ ಅಧಿಕ ಪ್ರಾಣಿ–ಪಕ್ಷಿಗಳನ್ನು ಈವರೆಗೆ ರಸ್ತೆಯಿಂದ ತೆರವುಗೊಳಿಸಿದ್ದೇನೆ. 10 ಪ್ರಾಣಿಗಳ ಅಂತ್ಯಕ್ರಿಯೆ ಮಾಡಿದ್ದೇನೆ’ ಎಂದರು.

‘ರಸ್ತೆಯಲ್ಲೇ ಸಾವನ್ನಪ್ಪಿದ ಪ್ರಾಣಿಗಳನ್ನು ಪಕ್ಕಕ್ಕೆ ಒಯ್ದಿಡುವುದರಿಂದ ಬೇರೆ ಅಪಘಾತಗಳನ್ನೂ  ತಪ್ಪಿಸಬಹುದು. ಒಂದುವೇಳೆ ನಾವೂ ಗಮನಿಸದೆ ಸತ್ತ ಪ್ರಾಣಿ ಮೇಲೆಯೇ ವಾಹನ ಓಡಿಸಿದರೆ, ಚಕ್ರಕ್ಕೆ ಅಂಟಿಕೊಂಡ ರಕ್ತ, ಮಾಂಸ ರಸ್ತೆ ತುಂಬೆಲ್ಲ ಹರಡಿ ಸಾಂಕ್ರಾಮಿಕ ಕಾಯಿಲೆ ಹರಡಬಹುದು. ತಾಯಿ ಡಾ.ಸುಶೀಲಾದೇವಿ, ಪತ್ನಿ ಡಾ.ಸುರೇಖಾ, ಸ್ನೇಹಿತ ಮಹಾಂತೇಶ ಶೀಲವಂತರ ಮತ್ತು ಕಾಲೇಜಿನವರೆಲ್ಲ ನನ್ನ ಸೇವೆಗೆ ಸಾಥ್‌ ನೀಡುತ್ತಿದ್ದಾರೆ’ ಎಂದು ತಿಳಿಸಿದರು. ಅವರ ಸಂಪರ್ಕ ಸಂಖ್ಯೆ: 9242496497.

ಡಾ.ಮಹಾಂತೇಶ ರಾಮಣ್ಣವರ
ವೈದ್ಯರೇ ಆಗಿರಬೇಕು ಎಂದೇನಿಲ್ಲ:
‘ಅಪಘಾತಕ್ಕೀಡಾಗಿ ಮೃತಪಟ್ಟ ಪ್ರಾಣಿಗಳನ್ನು ರಸ್ತೆಬದಿಗೆ ಒಯ್ದಿಡಲು ವೈದ್ಯರೇ ಆಗಿರಬೇಕು ಎಂದೇನಿಲ್ಲ. ಪರಿಸರ ಕಾಳಜಿ ಹೊಂದಿದ ಯಾರಾದರೂ ಈ ಕೆಲಸ ಮಾಡಬಹುದು. ಆದರೆ ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳಬೇಕು ಅಥವಾ ಮೂಗಿಗೆ ಬಟ್ಟೆ ಕಟ್ಟಿಕೊಳ್ಳಬೇಕು. ಕಾಗದ ಪ್ಲಾಸ್ಟಿಕ್‌ ಅಥವಾ ಬಟ್ಟೆ ಬಳಸಿ ಬಾಲ ಹಿಡಿದುಕೊಂಡು ಪ್ರಾಣಿಯನ್ನು ರಸ್ತೆಬದಿಗೆ ಎಳೆದು ತರಬೇಕು. ನಂತರ ಸೋಪಿನಿಂದ ಕೈಗಳನ್ನು ತೊಳೆದುಕೊಂಡರೆ ಸಾಕು’ ಎನ್ನುತ್ತಾರೆ ಮಹಾಂತೇಶ ರಾಮಣ್ಣವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.