ADVERTISEMENT

ಬೆಳಗಾವಿ: ನಿವೃತ್ತಿ ನಂತರ ಬದುಕು ನೀಡಿದ ಡ್ರ್ಯಾಗನ್

ಮೇಟ್ಯಾಲ: ಪೂಜಾರ ದಂಪತಿಯಿಂದ ಸಾವಯವ ಡ್ರ್ಯಾಗನ್ ಹಣ್ಣಿನ ಕೃಷಿ

ಪ್ರದೀಪ ಮೇಲಿನಮನಿ
Published 25 ಮೇ 2024, 6:53 IST
Last Updated 25 ಮೇ 2024, 6:53 IST
ಡ್ರ್ಯಾಗನ್ ಫ್ರೂಟ್ ತೋಟದಲ್ಲಿ ಸುರೇಖಾ ಪೂಜಾರ
ಡ್ರ್ಯಾಗನ್ ಫ್ರೂಟ್ ತೋಟದಲ್ಲಿ ಸುರೇಖಾ ಪೂಜಾರ   

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಮೇಟ್ಯಾಲ ಗ್ರಾಮದ ಸ್ವಂತ ಜಮೀನಿನಲ್ಲಿ ಸುರೇಖಾ ಶಿವಾನಂದ ಪೂಜಾರ ದಂಪತಿ ಸಾವಯವ ಡ್ರ್ಯಾಗನ್ ಹಣ್ಣಿನ ಕೃಷಿ ಕೈಗೊಂಡು ಗಮನ ಸೆಳೆದಿದ್ದಾರೆ. ಈ ಭಾಗದಲ್ಲಿ ಹೊಸ ಬೇಸಾಯವಾಗಿ ಗುರುತಿಸಿಕೊಂಡಿರುವ ಈ ಬೆಳೆಯು ರೈತರನ್ನು ಆಕರ್ಷಿಸುವಂತೆ ಮಾಡಿದೆ.

ಶಿಕ್ಷಣ ಇಲಾಖೆಯಲ್ಲಿ ಸಹ ಶಿಕ್ಷಕಿ, ವಲಯ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮತ್ತು ಮುಖ್ಯ ಶಿಕ್ಷಕಿಯಾಗಿ ಸುರೇಖಾ ಅವರು ಸುಮಾರು 39 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಪತಿ ಶಿವಾನಂದ ಅವರು 15 ವರ್ಷ ಮರಾಠಾ ಲೈಟ್ ಇನ್ಫೆಂಟ್ರಿಯಲ್ಲಿ ಸೇನಾನಿಯಾಗಿ ದುಡಿದು ನಿವೃತ್ತಿ ಪಡೆದಿದ್ದಾರೆ. ಪಿತ್ರಾರ್ಜಿತವಾಗಿ ಬಂದಿರುವ ಹತ್ತಾರು ಎಕರೆ ಜಮೀನಿನಲ್ಲಿ ಒಂದು ಎಕರೆಯಾದರೂ ಹೊಸ ಬೆಳೆ ಪ್ರಯೋಗ ಮಾಡುವ ಸಾಹಸಕ್ಕೆ ದಂಪತಿ ಇಳಿದಿದ್ದಾರೆ.

ಆದಾಯ ಆರಂಭ: ಸುರೇಖಾ ಅವರೇ ಹೆಚ್ಚು ಆಸಕ್ತಿ ತಳೆದು ಈ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ‘ಡ್ರ್ಯಾಗನ್ ಫ್ರೂಟ್ ಗಿಡಗಳ ಮಧ್ಯದಲ್ಲಿ ಆಫ್ರಿಕನ್ ಮಹಾಗಣಿ ಗಿಡಗಳನ್ನು ನಾಟಿ ಮಾಡಿದ್ದಾರೆ. ಮಹಾಗಣಿ ಮರಗಳಾದರೆ ಹಡಗು ನಿರ್ಮಾಣ, ಸಂಗೀತ ಪರಿಕರಗಳಿಗೆ ಈ ಕಟ್ಟಿಗೆ ಉಪಯೋಗಕ್ಕೆ ಬರುತ್ತದೆ’ ಎನ್ನುತ್ತಾರೆ.

ADVERTISEMENT

‘ಡ್ರ್ಯಾಗನ್ ಹಣ್ಣಿನ ಎಲೆಗಳಿಗೆ ಕರಿ ಮತ್ತು ಕೆಂಪು ಇರುವೆ ಕಾಟ ಹೆಚ್ಚಿರುತ್ತದೆ. ಹೆಚ್ಚು ಬಿಸಿಲು ಮತ್ತು ನೀರುಣ್ಣಿಸಿದರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದರ ಬಗ್ಗೆಯೂ ಗಮನ ಹರಿಸಿ ಉಪಚಾರ ಮಾಡಬೇಕು’ ಎಂದರು.

‘ಈಗಾಗಲೇ ಪೈರು ಬಂದಿದೆ. ಲಕ್ಷಾಂತರ ರೂಪಾಯಿ ಆದಾಯವನ್ನು ತಂದಿದೆ. ಒಂದು ಗಿಡಕ್ಕೆ ಕನಿಷ್ಟ 8 ರಿಂದ 32 ವರೆಗೆ ಹಣ್ಣು ಕೊಡುತ್ತವೆ. 25 ರಿಂದ 30 ವರ್ಷಗಳ ವರೆಗೆ ಗಿಡಗಳು ಬಾಳಿಕೆ ಬರುತ್ತವೆ. ಬೆಳೆಗಾರರ ಆರೈಕೆ ಮೇಲೆ ಗಿಡಗಳ ಆಯಸ್ಸು ನಿರ್ಧಾರ ಆಗುತ್ತದೆ’ ಎಂದು ನುಡಿದರು.

‘ಬೆಳಗಾವಿ ಮಾರುಕಟ್ಟೆಯೇ ಮಾರಾಟ ಕೇಂದ್ರ. 325 ಗ್ರಾಂ ನಿಂದ 850 ಗ್ರಾಂ ವರೆಗೂ ಹಣ್ಣು ತೂಗುತ್ತದೆ. ಕೆಜಿಯೊಂದಕ್ಕೆ ₹120 ರಿಂದ ₹150 ರವರೆಗೆ ಧಾರಣಿ ಸಿಕ್ಕಿದೆ’ ಎಂದು ಹರ್ಷ ಹಂಚಿಕೊಂಡರು.

ನಾಟಿ ಬಗೆ: ‘ನೇಗಿಲು ಹೊಡೆದು ಭೂಮಿ ಹದ ಮಾಡಿದ ನಂತರ ಸೆಗಣಿ, ಎರೆಹುಳು ಗೊಬ್ಬರ ಹಾಕಿ ಭೂಮಿ ಸಿದ್ದಪಡಿಸಲಾಯಿತು. ಸಿಮೆಂಟ್ ಕಂಬಗಳನ್ನು ನಿಲ್ಲಿಸಿ ಮಹಾರಾಷ್ಟ್ರದ ಬರಡ್ ನಿಂದ ತರಲಾಗಿದ್ದ ಜಂಬೂ ರೆಡ್ ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ನಾಟಿ ಮಾಡಲಾಯಿತು. ಎತ್ತರ ಬೆಳೆದ ನಂತರ ಸಿಮೆಂಟ್ ಕಂಬದ ಮೇಲಿರುವ ನಾಲ್ಕ ರಿಂಗ್‌ಗಳಲ್ಲಿ ಅವುಗಳನ್ನು ಸೇರಿಸಲಾಯಿತು’ ಎಂದು ಕೃಷಿಯ ವಿವರ ಹಂಚಿಕೊಂಡರು.

‘1.10 ಎಕರೆ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿಯನ್ನು ಕೈಗೊಳ್ಳಲಾಗಿದೆ. ಸಾಲಿನಿಂದ ಸಾಲಿಗೆ ಒಂಬತ್ತು ಅಡಿ, ಕಂಬದಿಂದ ಕಂಬಕ್ಕೆ 7 ಅಡಿ ಅಂತರದ ಮೇಲೆ ಒಟ್ಟು 2900 ಸಸಿ ನಾಟಿ ಮಾಡಲಾಗಿದೆ. ಪಡಲೊಡೆದು ಬೆಳೆಯಲು ಅನುಕೂಲವಾಗುವಂತೆ 726 ಸಿಮೆಂಟ್ ಕಂಬ ನೆಡಲಾಗಿದೆ. ತೋಟದಲ್ಲಿಯೇ ಎರೆಹುಳು ಗೊಬ್ಬರ ತಯಾರು ಮಾಡಿ ಗಿಡಗಳಿಗೆ ನೀಡಲಾಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ಸಹಾಯಧನದಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳಲಾಗಿದೆ. ಕಾಲಕಾಲಕ್ಕೆ ಅವರಿಂದಲೂ ಸಲಹೆ ಪಡೆದುಕೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಡ್ರ್ಯಾಗನ್ ಫ್ರೂಟ್ ಕೃಷಿ ಕೈಗೊಂಡಿರುವ ಸುರೇಖಾ ಪೂಜಾರ ಅವರಿಗೆ ಕಳೆದ ವರ್ಷ ಬೆಳಗಾವಿಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ‘ಪ್ರಗತಿಪರ ಕೃಷಿಕ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  ಮಾಹಿತಿಗೆ ಮೊಬೈಲ್‌: 9731164161.

ಡ್ರ್ಯಾಗನ್ ಫ್ರೂಟ್
ಹೆಚ್ಚು ಖನಿಜಾಂಶ ಒಳಗೊಂಡಿರುವ ಡ್ರ್ಯಾಗನ್ ಫ್ರೂಟ್ ಉಪಯೋಗಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕ್ಯಾನ್ಸರ್ ಸೆಲ್ ಸುಡುವ ಶಕ್ತಿಯೂ ಈ ಹಣ್ಣಿನಲ್ಲಿದೆ.
–ಸುರೇಖಾ ಪೂಜಾರ, ಕೃಷಿ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.