ADVERTISEMENT

ಬರಿದಾದ ಕೃಷ್ಣೆ; ಪೂರ್ವಭಾಗದಲ್ಲಿ ಬವಣೆ

ಬಾವಿ, ಬೋರ್‌ವೆಲ್‌ಗಳಲ್ಲಿ ನೀರು ಖಾಲಿ, ಟ್ಯಾಂಕರ್‌ ಮೂಲಕ ಪೂರೈಕೆಗೆ ಮುಂದಾದ ಅಧಿಕಾರಿಗಳು

ಪರಶುರಾಮ ನಂದೇಶ್ವರ
Published 24 ಮಾರ್ಚ್ 2024, 5:37 IST
Last Updated 24 ಮಾರ್ಚ್ 2024, 5:37 IST
ಅಥಣಿಯಲ್ಲಿ ಸಿಂಟೆಕ್ಸ್‌ ಮೂಲಕ ನೀರು ಸಾಗಿಸಿದ ರೈತರು
ಅಥಣಿಯಲ್ಲಿ ಸಿಂಟೆಕ್ಸ್‌ ಮೂಲಕ ನೀರು ಸಾಗಿಸಿದ ರೈತರು   

ಅಥಣಿ: 2018ರ ನಂತರ ಮತ್ತೆ ಈಗ ಕೃಷ್ಣಾ ನದಿ ಬತ್ತಿ ಹೋಗುವ ಪರಿಸ್ಥಿತಿಗೆ ಬಂದಿದೆ. ಪಟ್ಟಣದಲ್ಲಿ ಈಗಾಗಲೇ  ಬೋರ್‌ವೆಲ್‌ಗಳು ಬತ್ತಿವೆ. ಕೆರೆ, ಹಳ್ಳ, ಬಾವಿಗಳು ಬರಿದಾಗುತ್ತಿವೆ. ಸದ್ಯ ಇರುವ ನೀರು 20 ದಿನಗಳಿಗೆ ಮಾತ್ರ ಸಾಲುತ್ತದೆ. ಇನ್ನೂ ಎರಡು ತಿಂಗಳು ನೀರಿನ ಸಮಸ್ಯೆಗೆ ಪರಿಹಾರ ಏನು ಎಂಬ ಚಿಂತೆ ತಾಲ್ಲೂಕಿನ ಜನರನ್ನು ಕಾಡುತ್ತಿದೆ.

ಅಥಣಿ ಪೂರ್ವ ಭಾಗದ ತೆಲಸಂಗ, ಪಡತರವಾಡಿ, ಐಗಳಿ, ಕೋಹಳ್ಳಿ, ಕೆಸ್ಕರದಡ್ಡಿ, ಕಕಮರಿ, ರಾಮತೀರ್ಥ, ಕೊಟ್ಟಲಗಿ, ಬನ್ನೂರ, ಕನ್ನಾಳ, ಹಾಲಳ್ಳಿ, ಅರಟಾಳ, ಬಾಡಗಿ, ಮಾಣಿಕನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಗಳಿ ಕ್ರಾಸ್ ಮಾಣಿಕ ನಗರದಲ್ಲಿ ಸ್ಥಾಪನೆಗೊಂಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ ಪಂಪ್‌ಸೆಟ್ ರಿಪೇರಿಯ ನೆಪದಲ್ಲಿ ಕಳೆದ 15 ದಿನಗಳಿಂದ ನೀರು ಸರಬರಾಜು ಮಾಡಿಲ್ಲ. 11 ಗ್ರಾಮಗಳ ಜನರು ಆಯಾ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದೂ ಆಗಿದೆ.

ADVERTISEMENT

ಟ್ಯಾಂಕರ್‌ ನೀರು: ಸುಮಾರು 13 ಗ್ರಾಮಗಳಲ್ಲಿ ಈಗಾಗಲೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಪೂರ್ವ ಭಾಗದ ಹಳ್ಳಿಗಳ ಜನರಿಗೆ ನೀರು ಸಾಲದಂತಾಗಿದೆ. ಜನರಿಗೆ ಬವಣೆ ಆಗದಂತೆ ನೋಡಿಕೊಳ್ಳಿ ಎಂದು ತಾಲ್ಲೂಕು ಪಂಚಾಯಿತಿ ಇಒ ಶಿವಾನಂದ ಸೂಚಿಸಿದ್ದಾರೆ.

‘ಸರ್ಕಾರ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದರೂ ಯಾವುದೇ ಬರಗಾಲ ಪರಿಹಾರ ಬಂದಿಲ್ಲ. ಜನ– ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಟ್ಯಾಂಕರ್‌ನಿಂದ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಯಾಗಿದೆ. ಪಿಡಿಒಗಳು ಖರ್ಚಿಗೆ ಹಣವಿಲ್ಲದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಸಿ ತೋಟದ ವಸತಿಗಳಿಗೆ ನೀರು ಪೂರೈಕೆ ಮಾಡಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪಂಪ್‌ಸೆಟ್ ಕೂಡಲೇ ರಿಪೇರಿ ಮಾಡಿ ನಲ್ಲಿಗಳಿಗೆ ನೀರು ಸರಬರಾಜು ಮಾಡಬೇಕು’ ಎಂಬುದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದೇವೇಂದ್ರ ಬೆಳಗಲಿ ಅವರ ಆಗ್ರಹ.

ಅಥಣಿ ಪೂರ್ವ ಭಾಗದ ತೋಟದ ವಸತಿ ಜನರು ನೀರಿಗಾಗಿ ಪರದಾಡುವುದು ತಪ್ಪಿಲ್ಲ

ತೋಟದ ವಸತಿಗಳಲ್ಲಿ 40ಕ್ಕೂ ಅಧಿಕ ಕುಟುಂಬಗಳಿವೆ. ಬಾವಿ ಬೋರ್‌ವೆಲ್‌ ಬತ್ತಿವೆ. ಗ್ರಾಮ ಪಂಚಾಯಿತಿಗೆ ಹೇಳಿದರೆ ವಾರಕ್ಕೊಮ್ಮೆ ಮಾತ್ರ ಟ್ಯಾಂಕರ್‌ ನೀರು ಪೂರೈಸುತ್ತಿದ್ದಾರೆ

- ಹಣಮಂತ ತೆಲಸಂಗ ವಸತಿ ತೋಟ ಐಗಳಿ

ತಾಲ್ಲೂಕಿನಲ್ಲಿ ಹಲವೆಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಹಳೆ ಬೋರ್‌ವೆಲ್‌ ದುರಸ್ತಿಗೆ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಸಹಾಯವಾಣಿ ಆರಂಭಿಸಲಾಗಿದೆ

- ಶಿವಾನಂದ ಕಲ್ಲಾಪುರ ತಾಲ್ಲೂಕು ಪಂಚಾಯಿತಿ ಇಒ

ಅನೇಕ ಗ್ರಾಮ ತೋಟದ ವಸತಿ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಲು ಪಿಡಿಒಗಳಿಗೆ ಸೂಚಿಸಲಾಗಿದೆ

-ವಾಣಿ ಯು. ತಹಶೀಲ್ದಾರ್‌ ಅಥಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.