ರಾಮದುರ್ಗ (ಬೆಳಗಾವಿ ಜಿಲ್ಲೆ): ಬರದ ಬವಣೆಯಿಂದ ಬೇಸತ್ತ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ರಾಮಾಪುರ ತಾಂಡಾದ ಬಹುತೇಕ ಕುಟುಂಬಗಳು ಊರು ತೊರೆದಿವೆ. ಕೆಲ ವೃದ್ಧರು ಹೊರತುಪಡಿಸಿದರೆ ದುಡಿಯುವವರೆಲ್ಲ ಕೆಲಸ ಹುಡುಕುತ್ತ ನಗರಗಳಿಗೆ ಹೋಗಿದ್ದಾರೆ. ಇಡೀ ತಾಂಡಾ ಬಣಗುಡುತ್ತಿದೆ.
ಈ ತಾಂಡಾದಲ್ಲಿ 550 ಜನಸಂಖ್ಯೆ ಇದೆ. ಸದ್ಯ ಕೆಲ ವೃದ್ಧರು, ಅಂಗವಿಕಲರು ಸೇರಿ 50 ಮಂದಿ ಮಾತ್ರ ಇಲ್ಲಿದ್ದಾರೆ. ಬೆಳಗಾವಿ, ಮಂಗಳೂರು, ಗೋವಾ ಕಡೆಗೆ ಜನ ಕೆಲಸ ಹುಡುಕಿ ಹೋಗಿದ್ದಾರೆ. ತಾಂಡಾದ ಬಹುತೇಕ ಮನೆಗಳಿಗೆ ಬೀಗ ಹಾಕಲಾಗಿದೆ. ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ ಕುಸಿದಿದೆ.
‘ರಾಮದುರ್ಗ ತಾಲ್ಲೂಕಿನಲ್ಲಿ 18 ತಾಂಡಾಗಳಿದ್ದು ಬಹುತೇಕ ಮಂದಿ ವಲಸೆ ಹೋಗಿದ್ದಾರೆ. ಮಳೆ ಬಾರದ ಕಾರಣ ಕೈಗೆ ಕೆಲಸ ಸಿಗುತ್ತಿಲ್ಲ. ಬೇಸಿಗೆಯಲ್ಲಿ ಜೀವನ ನಿರ್ವಹಣೆ ಇನ್ನೂ ಕಷ್ಟಕರವಾಗಲಿದೆ. ಸರ್ಕಾರ ನೀಡುವ ಗೃಹಲಕ್ಷ್ಮಿ ಹಣ, ಪಡಿತರ ಜೀವನಕ್ಕೆ ಸಾಲುವುದಿಲ್ಲ. ಹೀಗಾಗಿ, ವಲಸೆ ಅನಿವಾರ್ಯವಾಗಿದೆ’ ಎಂದು ತಾಂಡಾದ ಹಿರಿಯರು ತಿಳಿಸಿದರು.
‘ಅಕ್ಕಪಕ್ಕದ ಊರು, ನೀರಾವರಿ ಜಮೀನುಗಳಲ್ಲಿ ಕೆಲಸ ಇದೆ. ಆದರೆ, ಕೂಲಿ ಬಹಳ ಕಡಿಮೆ. ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ತಲಾ ₹1000 ಕೂಲಿ ಇದೆ. ವಲಸೆ ಹೋಗಲು ಇದು ಕೂಡ ಕಾರಣ’ ಎಂದರು.
ಸಿಇಒ ಭೇಟಿ: ಬುಧವಾರ ತಾಂಡಾಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಜನರ ಅಳಲು ಆಲಿಸಿದರು. ‘ವಲಸೆಯಿಂದ ಮಕ್ಕಳ ಶಿಕ್ಷಣದ ಮೇಲೆ ಪೆಟ್ಟು ಬೀಳುತ್ತಿದೆ. ಕೂಡಲೇ ಉದ್ಯೋಗ ಖಾತ್ರಿ ಕೆಲಸ ಆರಂಭಿಸಿ, ತಾಂಡಾದ ಎಲ್ಲರಿಗೂ ಕೆಲಸ ನೀಡಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದರು.
ತಾಂಡಾಗಳ ಬಹುತೇಕ ಜನರಿಗೆ ಸ್ವಂತ ಜಮೀನು ಇಲ್ಲ. ಕೈ ತುಂಬ ಕೆಲಸ ಇಲ್ಲ. ಹೀಗಾಗಿ ಪ್ರತಿ ಸಲ ಬೇಸಿಗೆಯಲ್ಲಿ ವಲಸೆ ಹೋಗುವುದು ಸಾಮಾನ್ಯವಾಗಿದೆ.ವಿಜಯಕುಮಾರ ರಾಠೋಡ ಬಂಜಾರ ಸಮಾಜದ ಮುಖಂಡ ಆರಿಬೆಂಚಿ ತಾಂಡಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.