ಕಾಗವಾಡ (ಬೆಳಗಾವಿ ಜಿಲ್ಲೆ): ಅಕಾಲಿಕ ಮಳೆ,ಗಾಳಿಗೆ ದ್ರಾಕ್ಷಿ ಬೆಳೆ ಸಂಪೂರ್ಣ ಕೊಳೆತಿದ್ದು, ಗಡಿ ರೈತರಿಗೆ ಆರ್ಥಿಕ ನಷ್ಟವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಸ್ಪಂದನೆ ಸಿಕ್ಕಿಲ್ಲ ಎಂಬ ಬೇಸರ ಅವರಲ್ಲಿದೆ.
‘ಮಳೆಯಿಲ್ಲದ್ದಕ್ಕೆ ಟ್ಯಾಂಕರ್ ನೀರು ಪೂರೈಸಿ, ಸಮೃದ್ಧವಾಗಿ ದ್ರಾಕ್ಷಿ ಬೆಳೆದಿದ್ದೆವು. ಆದರೆ, ಈಚೆಗೆ ಸುರಿದ ಭಾರಿ ಮಳೆಯಿಂದ ಎಲ್ಲವೂ ನಾಶವಾಗಿದೆ. ಪ್ರತಿ ಎಕರೆಗೆ ₹2 ಲಕ್ಷದವರೆಗೆ ಖರ್ಚು ಮಾಡಲಾಗಿತ್ತು. ಪ್ರತಿ ಎಕರೆಗೆ ₹ 8 ರಿಂದ ₹ 10 ಲಕ್ಷದವರೆಗೆ ಆದಾಯ ಗಳಿಸುವ ನಿರೀಕ್ಷೆಯಿತ್ತು’ ಎಂದು ರೈತರು ತಿಳಿಸಿದರು.
ಬೆಳಗಾವಿ ಜಿಲ್ಲೆ ಕಾಗವಾಡ ಮತ ಕ್ಷೇತ್ರ ವ್ಯಾಪ್ತಿಯ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಪಾಂಡೆಗಾಂವ, ಖೋತವಾಡಿ, ಖಿಳೇಗಾಂವ, ಶಿರೂರ, ಮಂಗಸೂಳಿ ಸೇರಿ ಹಲವು ಗ್ರಾಮಗಳಲ್ಲಿ ದ್ರಾಕ್ಷಿ ಬೆಳೆ ನಾಶವಾಗಿದೆ.
‘ಸಾಲ ಮಾಡಿ ಹೆಚ್ಚು ಕಾಳಜಿ ವಹಿಸಿ, ಬೆಳೆದ ದ್ರಾಕ್ಷಿಯನ್ನು ಕಟಾವು ಮಾಡುವವರಿದ್ದೆವು. ಆದರೆ, ಅಕಾಲಿಕ ಮಳೆ ನಮ್ಮ ಬೆಳೆ ಹಾಳು ಮಾಡಿತು. ಮಳೆಯಿಂದ ದ್ರಾಕ್ಷಿ ಕೊಳೆತಿದೆ. ಸರ್ಕಾರ ಕೂಡಲೇ ನಮ್ಮ ನೆರವಿಗೆ ಬರಬೇಕು’ ಎಂದು ಪಾಂಡೆಗಾಂವ ಗ್ರಾಮದ ರೈತ ಮಹಿಳೆ ಸವಿತಾ ಕುರುಂದವಾಡೆ ತಿಳಿಸಿದರು.
‘ದ್ರಾಕ್ಷಿ ಬೆಳೆ ಈ ಬಾರಿ ಬದುಕಿಗೆ ಆಸರೆಯಾದೀತು ಎಂಬ ನಿರೀಕ್ಷೆ ಇತ್ತು. ಆದರೆ, ಎಲ್ಲವೂ ಹುಸಿಯಾಯಿತು. ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ದ್ರಾಕ್ಷಿ ಬೆಳೆಗಾರ ರಾಮಚಂದ್ರ ಪಾಟೀಲ ಒತ್ತಾಯಿಸಿದರು. ಹಾನಿಗೀಡಾದ ಜಮೀನಿಗೆ ಶಾಸಕ ರಾಜು ಕಾಗೆ ಭೇಟಿ ನೀಡಿ, ಪರಿಶೀಲಿಸಿದರು.
ದ್ರಾಕ್ಷಿ ಬೆಳೆ ನಾಶವಾಗಿರುವ ಕುರಿತು ಅಧಿವೇಶನದಲ್ಲಿ ಚರ್ಚಿಸಿ ರೈತರಿಗೆ ಪರಿಹಾರ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು–ರಾಜು ಕಾಗೆ ಶಾಸಕ ಕಾಗವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.