ಬೆಳಗಾವಿ: ಲಾಕ್ ಡೌನ್ ಸಂದರ್ಭದಲ್ಲಿ ನಕಲಿ ಇ-ವೇ ಬಿಲ್ ಬಳಕೆ ಹಾಗೂ ಒಂದೇ ಬಿಲ್ ಇಟ್ಟುಕೊಂಡು ಹಲವು ಬಾರಿ ವಾಣಿಜ್ಯ ಉತ್ಪನ್ನಗಳನ್ನು ಸಾಗಿಸಲು ಯತ್ನಿಸಿದವರಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.
ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ 20 ದಿನಗಳಲ್ಲಿ ₹ 1 ಕೋಟಿ ದಂಡ ವಸೂಲಿ ಮಾಡಿದ್ದಾರೆ.
'ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿ- 4 ಹಾಗೂ 13ರ ವ್ಯಾಪ್ತಿಯಲ್ಲಿ ದಾಳಿಗಳನ್ನು ನಡೆಸಿದ್ದೇವೆ. 130 ವಾಹನಗಳು ಬೋಗಸ್ ಬಿಲ್ ಇಟ್ಟುಕೊಂಡು ಹೋಗುತ್ತಿದ್ದುದು ಕಂಡುಬಂತು. ಅವಶ್ಯ ಸಾಮಗ್ರಿಗಳು ಎಂದು ಸ್ಟಿಕ್ಕರ್ ಅಂಟಿಸಿಕೊಂಡು ಅವರು ವಾಣಿಜ್ಯ ಸರಕು ಸಾಗಣೆ ಮಾಡುತ್ತಿದ್ದರು' ಎಂದು ವಾಣಿಜ್ಯ ತೆರಿಗೆ ಇಲಾಖೆ ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಕೆ.ರಾಮನ್ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.
'ಕೃಷಿ ಉತ್ಪನ್ನ ಸಾಗಣೆಗೆ ನೀಡಲಾಗಿದ್ದ ಅವಕಾಶ ದುರ್ಬಳಕೆಗೆ ಅವರು ಯತ್ನಿಸಿದ್ದರು. ಹೀಗಾಗಿ ನಿಗಾ ವಹಿಸಲಾಗಿತ್ತು. ಈಗಲೂ ನಿತ್ಯವೂ ತಪಾಸಣೆ ನಡೆಸಲಾಗುತ್ತಿದೆ. ಕಬ್ಬಿಣ, ಕೊಬ್ಬರಿ, ಅಡಿಕೆ, ಏಲಕ್ಕಿ, ಸಿಮೆಂಟ್ ಮೊದಲಾದ ವಾಣಿಜ್ಯ ಉತ್ಪನ್ನಗಳನ್ನು ಸಾಗಿಸಿ ತೆರಿಗೆ ವಂಚಿಸಲು ಮುಂದಾಗಿದ್ದು ಕಂಡುಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹೊರ ರಾಜ್ಯಕ್ಕೆ ಹಾಗೂ ಮಹಾರಾಷ್ಟ್ರ, ಗುಜರಾತ್, ಗೋವಾದಿಂದ ಕರ್ನಾಟಕಕ್ಕೆ ಸಾಗಿಸಲು ಯತ್ನ ನಡೆದಿರುವುದನ್ನು ಗುರುತಿಸಿದ್ದೇವೆ. ಬೆಳಗಿನ ಜಾವದಲ್ಲೂ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಸಾಮಾನ್ಯ ದಿನಗಳಿಗಿಂತ ಲಾಕ್ ಡೌನ್ ಸಂದರದಭದಲ್ಲಿ ಹೆಚ್ಚು ದಂಡ ಸಂಗ್ರಹವಾಗಿದೆ' ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.