ADVERTISEMENT

ಖಾಸಗೀಕರಣದಿಂದ ಸಮಸ್ಯೆಗಳ ಸುಳಿಯಲ್ಲಿ ಶಿಕ್ಷಣ ವ್ಯವಸ್ಥೆ: ನ್ಯಾ.ನಾಗಮೋಹನ ದಾಸ್‌

ಆರ್‌ಸಿಯು 14ನೇ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 13:29 IST
Last Updated 17 ಸೆಪ್ಟೆಂಬರ್ 2024, 13:29 IST
<div class="paragraphs"><p>ಬೆಳಗಾವಿಯಲ್ಲಿ ಮಂಗಳವಾರ ನಡೆದ ರಾಣಿ ಚನ್ನಮ್ಮ ವಿ.ವಿ 14ನೇ ಸಂಸ್ಥಾಪನಾ ದಿನಾಚರಣೆಯನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ ದಾಸ್ ಉದ್ಘಾಟಿಸಿದರು. ಪ್ರೊ.ಸಂತೋಷ ಕಾಮಗೌಡ, ಪ್ರೊ.ರವೀಂದ್ರನಾಥ ಕದಂ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪ್ರೊ.ಸಿ.ಎಂ. ತ್ಯಾಗರಾಜ್‌, ಲಕ್ಷ್ಮಣರಾವ್ ಚಿಂಗಳೆ, ಎಂ.ಎ. ಸಪ್ನ ಪಾಲ್ಗೊಂಡರು.</p></div>

ಬೆಳಗಾವಿಯಲ್ಲಿ ಮಂಗಳವಾರ ನಡೆದ ರಾಣಿ ಚನ್ನಮ್ಮ ವಿ.ವಿ 14ನೇ ಸಂಸ್ಥಾಪನಾ ದಿನಾಚರಣೆಯನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ ದಾಸ್ ಉದ್ಘಾಟಿಸಿದರು. ಪ್ರೊ.ಸಂತೋಷ ಕಾಮಗೌಡ, ಪ್ರೊ.ರವೀಂದ್ರನಾಥ ಕದಂ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪ್ರೊ.ಸಿ.ಎಂ. ತ್ಯಾಗರಾಜ್‌, ಲಕ್ಷ್ಮಣರಾವ್ ಚಿಂಗಳೆ, ಎಂ.ಎ. ಸಪ್ನ ಪಾಲ್ಗೊಂಡರು.

   

ಬೆಳಗಾವಿ: ‘ರಾಷ್ಟ್ರದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ ಒದಗಿಸುತ್ತದೆ. ಆದರೆ, ಶಿಕ್ಷಣದ ಖಾಸಗೀಕರಣದ ಫಲವಾಗಿ ಈಗ ಶಿಕ್ಷಣವೇ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ. ಸಮಾನ ಶಿಕ್ಷಣ ಹಾಗೂ ಗುಣಮಟ್ಟದ ಶಿಕ್ಷಣ ಇಂದಿನ ದೊಡ್ಡ ಅಗತ್ಯಗಳು’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ ದಾಸ್ ಅಭಿಪ್ರಾಯಪಟ್ಟರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಆರ್‌ಸಿಯು 14ನೇ ಸಂಸ್ಥಾಪನಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶಿಕ್ಷಣದಲ್ಲಿ ಖಾಸಗಿ ಸಹಭಾಗಿತ್ವ ಉತ್ತಮ. ಆದರೆ, ಶಿಕ್ಷಣದ ಖಾಸಗೀಕರಣ ಅಪಾಯಕಾರಿ. ಇದು ಸಮಾಜದಲ್ಲಿ ಬಹು ದೊಡ್ಡ ಅಸಮಾನತೆ ನಿರ್ಮಿಸಿಸುವ ಮೂಲಕ, ಅನೇಕರನ್ನು ಶಿಕ್ಷಣದಿಂದ ವಂಚಿತ ಮಾಡುತ್ತದೆ’ ಎಂದೂ ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಶಿಕ್ಷಣದಲ್ಲಿ ಇತ್ತೀಚೆಗೆ ಗುಣಮಟ್ಟ ಮತ್ತು ಮಾನವೀಯ ಮೌಲ್ಯಗಳ ಕೊರತೆ ಕಾಣುತ್ತಿದೆ. ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರ ಕೂಡ ನೀಡಬೇಕು. ಹೆಚ್ಚಿನ ಅಂಕಗಳು, ಉತ್ತಮ ಲ್ಯಾಬ್, ಸ್ಮಾರ್ಟ್‌ಕ್ಲಾಸ್‌, ಅತ್ಯಾಧುನಿಕ ಉಪಕರಣಗಳು ಎಲ್ಲವೂ ಶಿಕ್ಷಣದ ಗುಣಮಟ್ಟದ ಅಳೆಯುವ ಮಾಪನಗಳಾಗಿರುವುದು ಸೋಜಿಗದ ಸಂಗತಿ’ ಎಂದೂ ಅವರು ಅಭಿಪ್ರಾಯಪಟ್ಟರು.

‘ಶಿಕ್ಷಣ ಮತ್ತು ನಿರುದ್ಯೋಗ ಈಗಲೂ ಈ ದೇಶದ ಪ್ರಮುಖ ಸಮಸ್ಯೆಗಳು. ಕಳೆದ 40 ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣ ಅತ್ಯಂತ ಹೆಚ್ಚಿದೆ. ನಿರುದ್ಯೋಗದ ಪರಿಣಾಮ ಕಳ್ಳತನ, ಆತ್ಮಹತ್ಯೆ, ವೇಶ್ಯಾವಾಟಿಕೆ ಸೇರಿದಂತೆ ಅಪರಾಧ ಕೃತ್ಯಗಳ ಪ್ರಮಾಣ ಹೆಚ್ಚಳವಾಗುತ್ತದೆ. ಆದ್ದರಿಂದ ಉತ್ತಮ ಶಿಕ್ಷಣ ಹಾಗೂ ಉದ್ಯೋಗ ಕೊಡುವಲ್ಲಿ ಸರ್ಕಾರ ಗಮನಹರಿಸಬೇಕು’ ಎಂದು ಸೂಚನೆ ನೀಡಿದರು.

‘ಸಂವಿಧಾನ ನಮ್ಮೆಲ್ಲರಿಗೂ ದೊರೆತ ಬಹು ದೊಡ್ಡ ವರದಾನ. ಈ ಅಸ್ತ್ರದ ಬಳಕೆಯಿಂದ ಅಸಮಾನತೆ, ಅಪಚಾರ ಮತ್ತು ಅನಾಚಾರಗಳನ್ನು ತೊಡೆದು ಹಾಕಲಾಗಿದೆ. ಸಂವಿಧಾನವನ್ನು ಎಲ್ಲರೂ ಓದಬೇಕು. ಸರಿಯಾಗಿ ಅರ್ಥೈಸಿಕೊಂಡು ಬಾಳಿನಲ್ಲಿ ರೂಢಿಸಿಕೊಳ್ಳಬೇಕು’ ಎಂದೂ ಕಿವಿಮಾತು ಹೇಳಿದರು.

ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿದರು. ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ಅಧಿಕಾರಿ ಎಂ.ಎ. ಸಪ್ನ, ಸಿಂಡಿಕೇಟ್‌ ಸದಸ್ಯರು, ಆಕಾಡೆಮಿಕ್‌ ಕೌನ್ಸಿಲ್ ಸದಸ್ಯರು ಇದ್ದರು.

ಕುಲಸಚಿವ ಸಂತೋಷ ಕಾಮಗೌಡ ಸ್ವಾಗತಿಸಿದರು. ಪ್ರೊ.ಗಜಾನನ ನಾಯ್ಕ್ ನಿರೂಪಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಂ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.