ADVERTISEMENT

ಬೆಳಗಾವಿ: ಹೈನುಗಾರರಿಗೆ ‘ಬರೆ’ ಹಾಕಿದ ನೆರೆ

ಒಕ್ಕೂಟಕ್ಕೆ ಬರುವ ಹಾಲಿನ ಪ್ರಮಾಣದಲ್ಲಿ ಕುಸಿತ

ಎಂ.ಮಹೇಶ
Published 16 ಆಗಸ್ಟ್ 2019, 20:15 IST
Last Updated 16 ಆಗಸ್ಟ್ 2019, 20:15 IST
   

ಬೆಳಗಾವಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಹೈನುಗಾರಿಕೆ ಮೇಲೆ ಬಲವಾದ ಹೊಡೆತ ಬಿದ್ದಿದೆ. ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಬೆಮುಲ್‌) ಬರುವ ಹಾಲಿನ ಪ್ರಮಾಣದಲ್ಲೂ ಕುಸಿತ ಕಂಡುಬಂದಿದೆ.

ಜಿಲ್ಲೆಯಲ್ಲಿ 749 ಹಾಲು ಉತ್ಪಾದನಾ ಸಂಘಗಳು ಒಕ್ಕೂಟದಲ್ಲಿ ನೋಂದಾಯಿಸಿವೆ. ಇವುಗಳ ಪೈಕಿ 597 ಕಾರ್ಯನಿರ್ವಹಿಸುತ್ತಿವೆ. ಈ ತಿಂಗಳ ಮೊದಲ ವಾರದಿಂದ ನೆರೆಯಿಂದಾಗಿ ಉತ್ಪಾದನೆಯಲ್ಲಿ ನಿತ್ಯವೂ ಸರಾಸರಿ 35 ಸಾವಿರ ಲೀಟರ್‌ ಕಡಿಮೆಯಾಗಿದೆ. ಪ್ರವಾಹಕ್ಕೆ ಮುನ್ನ ನಿತ್ಯ 1.8 ಲಕ್ಷ ಲೀಟರ್‌ ಬರುತ್ತಿತ್ತು. ಇದು 1.35 ಲಕ್ಷ ಲೀಟರ್‌ಗೆ ಇಳಿಕೆಯಾಗಿತ್ತು. 3–4 ದಿನಗಳಿಂದ ಕೊಂಚ ಸುಧಾರಿಸಿದ್ದು, ಈಗ ನಿತ್ಯ 1.50 ಲಕ್ಷ ಲೀಟರ್ ಆಸುಪಾಸಿನಲ್ಲಿದೆ.

274 ಜಾನುವಾರು ಸಾವು: ಪ್ರವಾಹ ದಿಂದಾಗಿ 274 ಜಾನುವಾರು ಮೃತ ಪಟ್ಟಿವೆ. ಹಸಿರು ಹುಲ್ಲು ಜಲಾವೃತ ವಾಗಿರುವುದರಿಂದ ಮೇವಿಗೆ ಕೊರತೆ ಉಂಟಾಗಿದೆ. ಇವೆಲ್ಲ ಕಾರಣ ಗಳಿಂದಾಗಿ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಪ್ರಮಾಣ ಇಳಿಕೆಯಾಗಿದೆ. ಪರಿಣಾಮ, ಹೈನುಗಾರರು ನಷ್ಟ ಅನುಭವಿಸುವಂತಾಗಿದೆ.

ADVERTISEMENT

‘ನೆರೆಯಿಂದಾಗಿ ಒಕ್ಕೂಟಕ್ಕೆ ಬರುವ ಹಾಲಿನ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಚೇತರಿಸಿಕೊಳ್ಳಲು ಇನ್ನೂ ಹಲವು ತಿಂಗಳುಗಳೇ ಬೇಕಾಗುತ್ತವೆ’ ಎಂದು ಒಕ್ಕೂಟದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸೋಮ್‌ಪ್ರಸನ್ನ ತಿಳಿಸಿದರು.

ನಿರೀಕ್ಷೆ ತಲುಪಲಾಗದು: ‘ಈ ಹಂಗಾಮಿ ನಲ್ಲಿ ನಿತ್ಯ ಹಾಲು ಉತ್ಪಾದನೆಯ ಪ್ರಮಾಣ 2.50 ಲಕ್ಷ ಲೀಟರ್‌ನಿಂದ 2.75 ಲಕ್ಷ ಲೀಟರ್‌ಗೆ ಹೋಗುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ, ಇದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಈಗ ಇದೆ. ಅತಿ ಹೆಚ್ಚು ಹಾಲು ಉತ್ಪಾ ದನೆಯಾಗುವ ಚಿಕ್ಕೋಡಿ, ಕಾಗವಾಡ, ರಾಯಬಾಗ ಹಾಗೂ ಅಥಣಿ ಭಾಗದಲ್ಲಿ ಹೆಚ್ಚಿನ ತೊಂದರೆಯಾಗಿದೆ’ ಎಂದು ಮಾಹಿತಿ ನೀಡಿದರು.

‘ಪರಿಹಾರ ಕೇಂದ್ರಗಳಲ್ಲಿ ಜನರಿಗೆ ವಿತರಿಸಲು ‘ನಂದಿನಿ’ ಹಾಲು ಹಾಗೂ ಜಾನುವಾರುಗಳಿಗೆ ‘ನಂದಿನಿ’ ಪಶು ಆಹಾರವನ್ನು ಉಚಿತವಾಗಿ ನೀಡ ಲಾಗುತ್ತಿದೆ. ಒಕ್ಕೂಟಕ್ಕೆ ಪೂರೈಸುವ ಎಮ್ಮೆ ಹಾಗೂ ಆಕಳಿನ ಹಾಲಿಗೆ ಪ್ರತಿ ಲೀಟರ್‌ಗೆ 50 ಪೈಸೆ ಹೆಚ್ಚುವರಿಯಾಗಿ ಕೊಡಲು, ಪ್ರತಿ ಟನ್ ಪಶು ಆಹಾರಕ್ಕೆ ₹1 ಸಾವಿರ ಸಹಾಯಧನ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಸಂತ್ರಸ್ತರು ಸುಧಾರಿಸಿಕೊಳ್ಳಲು ನೆರವಾಗುತ್ತಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.