ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಅಡಹಳ್ಳಟ್ಟಿಯ ಹಿಪ್ಪರಗಿ ತೋಟದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024–25ನೇ ಸಾಲಿನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಹೆಸರಿನಲ್ಲಿ ಮುಖ್ಯಶಿಕ್ಷಕ ಸಿದ್ದಮಲ್ಲ ಖೋತ ಅವರು, ₹1 ಸಾವಿರ ಠೇವಣಿ ಇರಿಸಲು ಮುಂದಾಗಿದ್ದಾರೆ.
ಕರ್ನಾಟಕ–ಮಹಾರಾಷ್ಟ್ರ ಗಡಿಯಲ್ಲಿರುವ ಈ ಶಾಲೆ 2005ರಲ್ಲಿ ಸ್ಥಾಪನೆಯಾಗಿದೆ. 2015ರವರೆಗೂ ಇಲ್ಲಿ 1ರಿಂದ 7ನೇ ತರಗತಿಯಲ್ಲಿ 60ರಿಂದ 70 ವಿದ್ಯಾರ್ಥಿಗಳು ಓದುತ್ತಿದ್ದರು. ಶಿಕ್ಷಕರು ಮತ್ತು ಮೂಲಸೌಕರ್ಯ ಕೊರತೆಯಿಂದಾಗಿ ಮಕ್ಕಳ ದಾಖಲಾತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ 18 ಮಕ್ಕಳಷ್ಟೇ ಇದ್ದರು.
2023ರ ಜುಲೈನಲ್ಲಿ ಈ ಶಾಲೆಗೆ ನಿಯೋಜನೆಗೊಂಡ ಖೋತ, ಮಕ್ಕಳನ್ನು ಸೆಳೆಯಲು ನಾನಾ ಶೈಕ್ಷಣಿಕ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಊರಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ತಿಂಗಳಿಗೊಮ್ಮೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ, ತಾವೇ ಸ್ವತಃ ಬಹುಮಾನ ನೀಡುತ್ತಿದ್ದಾರೆ. ಗ್ರಾಮದ ಯುವಕ–ಯುವತಿಯರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ತರಬೇತಿ ಕಾರ್ಯಾಗಾರ ಸಂಘಟಿಸಿದ್ದಾರೆ. ಅಲ್ಲದೆ, ಈ ಬೇಸಿಗೆಯಲ್ಲೂ ತಮ್ಮ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿ ನಡೆಸಿದ್ದಾರೆ. ದಾನಿಗಳ ನೆರವಿನೊಂದಿಗೆ ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದರೊಂದಿಗೆ ಒಂದನೇ ತರಗತಿಯಿಂದಲೇ ದಾಖಲಾತಿ ಹೆಚ್ಚಿಸುವ ಪ್ರಯತ್ನಕ್ಕೂ ಕೈಹಾಕಿದ್ದಾರೆ.
‘ಕಳೆದ ವರ್ಷ ನಮ್ಮಲ್ಲಿ 1ನೇ ತರಗತಿಗೆ ಇಬ್ಬರು ಮಕ್ಕಳಿದ್ದರು. ಈ ಬಾರಿ ಶಾಲೆ ಆರಂಭೋತ್ಸವ ದಿನವೇ 9 ಮಕ್ಕಳು ಪ್ರವೇಶ ಪಡೆದಿದ್ದಾರೆ. ಠೇವಣಿ ಇರಿಸುವುದು ಸಣ್ಣ ಪ್ರಯತ್ನವಷ್ಟೇ. ನಮಗೆ ಲಭ್ಯವಿರುವ ಸೌಕರ್ಯ ಬಳಸಿಕೊಂಡು ಒಂದು ವರ್ಷದ ಅವಧಿಯಲ್ಲಿ ಕೈಗೊಂಡ ಶೈಕ್ಷಣಿಕ ಕಾರ್ಯಕ್ರಮ ಮೆಚ್ಚಿ ಮಕ್ಕಳು ನಮ್ಮ ಶಾಲೆಗೆ ಬರುತ್ತಿದ್ದಾರೆ’ ಎಂದು ಸಿದ್ದಮಲ್ಲ ಖೋತ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶಾಲೆಯಲ್ಲಿನ ಶಿಕ್ಷಕರೆಲ್ಲ ಸೇರಿಕೊಂಡು ದಾಖಲಾತಿ ಅಭಿಯಾನ ನಡೆಸುತ್ತಿದ್ದೇವೆ. ವಿವಿಧ ತರಗತಿಗಳ ಪ್ರವೇಶಕ್ಕೂ ಹಲವರು ಸಂಪರ್ಕಿಸಿದ್ದು, ಈ ವಾರ ಮಕ್ಕಳ ದಾಖಲಾತಿ 40 ದಾಟಲಿದೆ’ ಎಂದರು.
‘ಈ ಶಾಲೆಗೆ ಆವರಣ ಗೋಡೆ, ಸುಸಜ್ಜಿತ ಶೌಚಗೃಹ ನಿರ್ಮಿಸಬೇಕು. ಕುಡಿಯುವ ನೀರಿನ ಫಿಲ್ಟರ್, ಆಧುನಿಕ ಕಲಿಕೋಪಕರಣಗಳ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ’ ಎಂಬುದು ವಿದ್ಯಾರ್ಥಿಗಳ ಪಾಲಕರ ಒತ್ತಾಯ.
ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸುತ್ತೇನೆ. 18 ವರ್ಷ ವಯಸ್ಸಾದ ನಂತರ ಮಕ್ಕಳು ಆ ಹಣ ಪಡೆಯಬಹುದುಸಿದ್ದಮಲ್ಲ ಖೋತ ಮುಖ್ಯಶಿಕ್ಷಕ
ನಮ್ಮೂರಿನ ಶಾಲೆ ಉಳಿವಿಗಾಗಿ ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಖಾಸಗಿ ಶಾಲೆ ಬದಲಿಗೆ ಸರ್ಕಾರಿ ಶಾಲೆಗೆ ನನ್ನ ಮಗನನ್ನು ಸೇರಿಸಿದ್ದೇನೆಮಲ್ಲಿಕಾರ್ಜುನ ಕೂಡ್ಲಪ್ಪಗೋಳ ಪಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.