ADVERTISEMENT

ಬೆಳಗಾವಿ: ಸಂಭ್ರಮದ ‘ಈದ್‌–ಮಿಲಾದ್‌’ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 11:40 IST
Last Updated 1 ಅಕ್ಟೋಬರ್ 2023, 11:40 IST
<div class="paragraphs"><p>ಬೆಳಗಾವಿಯಲ್ಲಿ&nbsp;ಈದ್‌–ಮಿಲಾದ್‌ ಹಬ್ಬದ ಮೆರವಣಿಗೆ</p></div>

ಬೆಳಗಾವಿಯಲ್ಲಿ ಈದ್‌–ಮಿಲಾದ್‌ ಹಬ್ಬದ ಮೆರವಣಿಗೆ

   

ಬೆಳಗಾವಿ: ಸತತ ಮಳೆ ಮಧ್ಯೆಯೂ ನಗರದಲ್ಲಿ ಭಾನುವಾರ ಈದ್‌–ಮಿಲಾದ್‌ ಹಬ್ಬದ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ಪ್ರತಿವರ್ಷ ಈದ್‌–ಮಿಲಾದ್‌ ದಿನವೇ ಮೆರವಣಿಗೆ ನಡೆಯುತ್ತಿತ್ತು. ಈ ಬಾರಿಯೂ ಹಬ್ಬದ ದಿನವೇ(ಸೆಪ್ಟೆಂಬರ್‌ 28ರಂದು) ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಂದು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯೂ ಇದ್ದಿದ್ದರಿಂದ ಮುಸ್ಲಿಮರು ಈದ್‌ ಮೆರವಣಿಗೆ ಮುಂದೂಡಿ ಸಾಮರಸ್ಯ ಮೆರೆದಿದ್ದರು. ಭಾನುವಾರ ಮುಸ್ಲಿಮರೊಂದಿಗೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪ್ರಮುಖರು ಈದ್‌–ಮಿಲಾದ್‌ ಮೆರವಣಿಗೆಯಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆದರು.

ADVERTISEMENT

ಇಲ್ಲಿನ ಹಳೇ ಪಿ.ಬಿ. ರಸ್ತೆಯ ಜಿನ್ನಾ ಚೌಕ್‌ನಿಂದ ಆರಂಭಗೊಂಡ ಮೆರವಣಿಗೆ, ಕೇಂದ್ರೀಯ ಬಸ್‌ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ ಮಾರ್ಗವಾಗಿ ಸಂಚರಿಸಿ ಕ್ಯಾಂಪ್‌ ಪ್ರದೇಶದಲ್ಲಿರುವ ಹಜರತ್‌ ಸೈಯದ್‌ ಅಸದ್‌ಖಾನ್‌ ದರ್ಗಾ ಆವರಣ ತಲುಪಿತು.

ಬೆಳಗಾವಿಯಲ್ಲಿ ಈದ್‌–ಮಿಲಾದ್‌ ಹಬ್ಬದ ಮೆರವಣಿಗೆ

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಜನರು, ಮಳೆಯಲ್ಲೂ ಉತ್ಸಾಹದಿಂದ ಹೆಜ್ಜೆಹಾಕಿದರು. ಸಾಂಪ್ರದಾಯಿಕ ದಿರಿಸಿನಲ್ಲಿದ್ದ ಮಕ್ಕಳು, ಯುವಕರು ಇಸ್ಲಾಂ ಧರ್ಮದ ಧ್ವಜಗಳನ್ನು ಹಾರಿಸಿ ಸಂಭ್ರಮಿಸಿದರು. ಕವ್ವಾಲಿಗಳು ಜನರನ್ನು ರಂಜಿಸಿದವು. ಪವಿತ್ರ ಧಾರ್ಮಿಕ ಸ್ಥಳಗಳನ್ನು ಬಿಂಬಿಸುವ ರೂಪಕಗಳು ಗಮನಸೆಳೆದವು.

ಮೆರವಣಿಗೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಧರ್ಮಗುರು ಮುಫ್ತಿ ಮಂಜೂರ್ ಆಲಂ ಹಬ್ಬದ ಸಂದೇಶ ನೀಡಿದರು.

ಶಾಸಕ ಆಸೀಫ್‌ ಸೇಠ್‌, ‘ವಿವಿಧತೆಯಲ್ಲಿ ಏಕತೆ ಕಾಣುವ ಜಿಲ್ಲೆ ಬೆಳಗಾವಿ. ಇಲ್ಲಿ ಎಲ್ಲ ಹಬ್ಬಗಳನ್ನು ಹಿಂದೂ–ಮುಸ್ಲಿಮರು ಒಂದಾಗಿ ಆಚರಿಸುತ್ತ ಬಂದಿದ್ದೇವೆ. ಈ ಪರಂಪರೆಯನ್ನು ಹೀಗೆಯೇ ಮುಂದುವರಿಸೋಣ’ ಎಂದು ಆಶಿಸಿದರು. ‘ಸಕಲ ಜೀವರಾಶಿಗೆ ಒಳಿತಾಗಲಿ’ ಎಂದು ಮುಸ್ಲಿಮರು ಅಲ್ಲಾಹು ದೇವರಲ್ಲಿ ಪ್ರಾರ್ಥಿಸಿದರು.

ಮಾಜಿ ಶಾಸಕ ಫಿರೋಜ್‌ ಸೇಠ್‌, ಡಿಸಿಪಿ ರೋಹನ ಜಗದೀಶ, ಎಸಿಪಿ ಎನ್‌.ವಿ.ಭರಮನಿ, ಮುಖಂಡರಾದ ಅಕ್ಬರ್‌ ಬಾಗವಾನ, ಮಹಮ್ಮದ್‌ ಪೀರಜಾದೆ, ಮೌಲಾನಾ ಸರ್ದಾರ್‌, ರಂಜೀತ ಚವ್ಹಾಣಪಾಟೀಲ, ವಿಕಾಸ ಕಲಘಟಗಿ ಇತರರಿದ್ದರು. ವಿವಿಧ ಸಂಘಟನೆಗಳ ಮುಖಂಡರು ತಂಪು–ಪಾನೀಯ, ಸಿಹಿ ಪದಾರ್ಥಗಳು ಹಾಗೂ ನೀರು ವಿತರಿಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಮೆರವಣಿಗೆ ನಡೆಯಿತು.

ಬೆಳಗಾವಿಯಲ್ಲಿ ಈದ್‌–ಮಿಲಾದ್‌ ಹಬ್ಬದ ಮೆರವಣಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.