ಹುಕ್ಕೇರಿ: ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ತಾಲ್ಲೂಕಿನಲ್ಲಿ ಗುರುವಾರ ಮಸಲ್ಮಾನ ಬಾಂಧವರು ಶ್ರದ್ಧಾಭಕ್ತಿಯಿಂದ ಈದ್ ಮಿಲಾದ್ ಆಚರಿಸಿದರು.
ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣ, ಯಮಕನಮರಡಿ, ಪಾಶ್ಚಾಪುರ ಸೇರಿ ವಿವಿಧ ಗ್ರಾಮಗಳಲ್ಲಿನ ಮಸೀದಿಗಳಲ್ಲಿ ಮೌಲ್ವಿಯವರು ಪೈಗಂಬರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿ ಸಾರ್ವತ್ರಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಿವೃತ್ತ ಪ್ರಾಚಾರ್ಯ ಕುತಬುದ್ದಿನ್ ಸೈಯದ್, ಚಿಕ್ಕೋಡಿ ಜಿಲ್ಲಾ ವಕ್ಫ್ ಬೋರ್ಡ್ ನಿರ್ದೇಶಕ ಶಹಜಾನ ಬಡಗಾಂವಿ ಮಾತನಾಡಿ, ಮುಹಮ್ಮದ್ ಪೈಗಂಬರ್ ಜಯಂತಿಯು ದಾನ, ಪುಣ್ಯ ತ್ಯಾಗದ ಕಾರ್ಯಗಳಿಗೆ ಪ್ರೇರಣೆ ನೀಡುತ್ತದೆ ಎಂದರು.
ಬಡವ–ಬಲ್ಲಿದ, ಶತ್ರು–ಮಿತ್ರ, ಗಂಡು–ಹೆಣ್ಣು ಎಂಬ ಭೇದವಿಲ್ಲ ಎನ್ನುವ ಸಂದೇಶ ಸಾರುವ ದಿನವಿದು ಎಂದರು. ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಭೇದವಿಲ್ಲದೆ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ಸಮುದಾಯದ ಮುಖಂಡರು, ಮಕ್ಕಳು, ಯುವಕರು, ಶ್ವೇತವರ್ಣದ ಉಡುಪು ಧರಿಸಿ ಕೈಯಲ್ಲಿ ದ್ವಜ ಹಿಡಿದು ಮೆರವಣಿಗೆ ಮೂಲಕ ಮಾಸಾಬಿ ದರ್ಗಾಕ್ಕೆ ತೆರಳಿ, ಹೊಸ ಬಸ್ ನಿಲ್ದಾಣ ಹತ್ತಿರದ ಪೈಗಂಬರ್ ದರ್ಗಾಕ್ಕೆ ಗಲಿಫ್ ಹೊದಿಸಿ ಪ್ರಾರ್ಥಿಸಿದರು. ತನ್ನಿಮಿತ್ತ ಪೈಗಂಬರ್ ದರ್ಗಾದಲ್ಲಿ 25ನೇ ವರ್ಷದ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಮುಖಂಡರಾದ ಬಾಬಾಜಾನ್ ಖಾಜಿ, ಮಿರ್ಜಾ ಮೊಮೀನ್, ಅಸ್ಲಂ ಶೇಖಬಡೆ, ಇಮ್ತಾಜ್ ನದಾಫ, ಮೊಮೀನದಾದಾ, ಸಲಿಂ ನದಾಫ್ ಮಹಮ್ಮದ ಬಡಗಾಂವಿ, ನಾಶೀರ ಸುತಾರ, ಇಪ್ತಿಕಾರ ಪೀರಜಾದೆ, ಮಹಮ್ಮದ್ ನದಾಪ್, ಮೀರಾಸಾಬ್ ಚೌಧರಿ, ಕಬೀರ ಮಲ್ಲಿಕ್, ಆದಂ ಖಾನಜಾದೆ, ಸೋಹೇಬ ಬಡಗಾಂವಿ, ಶಬ್ಬೀರ್ ಸನದಿ, ಅಬ್ಲುಲ್ ನದಾಫ, ಫೀರೋಜ ಮಕಾನದಾರ, ಯಾಶೀನ ಮನಿಯಾರ, ಮುಜಾಹಿದ್ ನದಾಫ, ದಿಲಾವರ ಬಡಗಾಂವಿ, ವಿವಿಧ ಮದರಸಾ ಶಾಲೆ ವಿದ್ಯಾರ್ಥಿಗಳು, ಮೌಲಾನಾಗಳು ಹಾಜರಿದ್ದರು.
ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಮಹಾಂತೇಶ ಬಸ್ಸಾಪೂರೆ, ರಮೇಶ ಛಾಯಾಗೋಳ, ಶಿವಶರಣ ಅವಜಿ ನೇತೃತ್ವದಲ್ಲಿ ಅಹಿತಕರ ಘಟನೆ ಜರುಗದಂತೆ ಆಯ ಕಟ್ಟಿನ ಸ್ಥಳಗಳಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.