ADVERTISEMENT

ಉಪಚುನಾವಣೆ: ‘ಕೈ’ ತಯಾರಿ ಜೋರು! ಅವಕಾಶ ದಿಗ್ವಿಜಯಗೋ, ಪ್ರಕಾಶ ಹುಕ್ಕೇರಿಗೋ?

ಎಂ.ಮಹೇಶ
Published 28 ಜುಲೈ 2019, 19:30 IST
Last Updated 28 ಜುಲೈ 2019, 19:30 IST
ಶ್ರೀಮಂತ ಪಾಟೀಲ
ಶ್ರೀಮಂತ ಪಾಟೀಲ   

ಬೆಳಗಾವಿ: ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅನರ್ಹಗೊಂಡಿರುವುದರಿಂದ, ಅಲ್ಲಿ ಎದುರಾಗಬಹುದಾದ ಉಪ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದಲ್ಲಿ ಈಗಾಗಲೇ ತಯಾರಿ ಆರಂಭವಾಗಿದೆ.

ಪಕ್ಷದ ಮುಖಂಡ, ಶಾಸಕ ಸತೀಶ ಜಾರಕಿಹೊಳಿ ಅವರು ಅಭ್ಯರ್ಥಿ ಯಾರಾಗಬೇಕು ಎನ್ನುವ ಕುರಿತು ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಇದರೊಂದಿಗೆ, ಅಲ್ಲಿ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಈ ಕುರಿತ ಚರ್ಚೆಗಳು ಕ್ಷೇತ್ರದಲ್ಲಿ ಆರಂಭವಾಗಿವೆ. ಶಾಸಕರ ಅನರ್ಹತೆ ತೀರ್ಪನ್ನು ಅಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ಸ್ವಾಗತಿಸಿರುವುದು ವಿಶೇಷ.

ಹಿಂದೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಇಲ್ಲಿ ಒಮ್ಮೆ ಸಂಯುಕ್ತ ಜನತಾದಳ ಹಾಗೂ 3 ಬಾರಿ ಬಿಜೆಪಿಯಿಂದ ಭರಮಗೌಡ (ರಾಜು) ಕಾಗೆ ಸತತವಾಗಿ ಆಯ್ಕೆಯಾಗಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀಮಂತ ಪಾಟೀಲ ಗೆದ್ದಿದ್ದರು. ಇದೀಗ, ಅನರ್ಹಗೊಂಡಿರುವುದರಿಂದ ಅವರ ರಾಜಕೀಯ ಭವಿಷ್ಯದ ಮೇಲೆ ಕಾರ್ಮೋಡ ಕವಿದಿದೆ. ತಮ್ಮನ್ನು ಗೆಲ್ಲಿಸಿದ ಮತದಾರರನ್ನು ಕಡೆಗಣಿಸಿ, ತಮ್ಮ ನಾಯಕ ರಮೇಶ ಜಾರಕಿಹೊಳಿ ಬೆಂಬಲಿಸಿ ಅನರ್ಹತೆಯ ಸಂಕಷ್ಟ ತಂದೊಡ್ಡಿಕೊಂಡಿದ್ದಾರೆ. ಅವರ ನಡೆ ಬಗ್ಗೆ ಕ್ಷೇತ್ರದ ಜನರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

ADVERTISEMENT

ಆಕಾಂಕ್ಷಿಗಳಾರು?:

ಕಾಂಗ್ರೆಸ್‌ನಿಂದ ದಿಗ್ವಿಜಯ ಪವಾರ ದೇಸಾಯಿ, ಪುರಸಭೆ ಮಾಜಿ ಉಪಾಧ್ಯಕ್ಷ ರವೀಂದ್ರ ಗಾಣಿಗೇರ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಸೋತಿರುವ ಪ್ರಕಾಶ ಹುಕ್ಕೇರಿ ಕೂಡ ಟಿಕೆಟ್‌ ಬಯಸಿದ್ದಾರೆ ಎನ್ನಲಾಗುತ್ತಿದೆ.

2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ ದೊರೆಯಲಿಲ್ಲವೆಂದು ಬಂಡಾಯ ಸಾರಿದ ಶ್ರೀಮತ ಪಾಟೀಲ ಕೊನೆ ಕ್ಷಣದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದ ದಿಗ್ವಿಜಯ ಬಿಜೆಪಿಯ ರಾಜು ಕಾಗೆ ವಿರುದ್ಧ ಸೋತಿದ್ದರು. ಸೋಲಿಗೆ ಶ್ರೀಮಂತ ಪಾಟೀಲ ಪಕ್ಷಾಂತರ ಮಾಡಿದ್ದು ಕಾರಣವಾಗಿತ್ತು ಎಂದು ಕಾರ್ಯಕರ್ತರು ಆರೋಪಿಸಿದ್ದರು. ನಂತರದ (2013ರ) ಚುನಾವಣೆಯಲ್ಲೂ ಜೆಡಿಎಸ್‌ನಿಂದಲೇ ಸ್ಪರ್ಧಿಸಿ ಸೋತಿದ್ದರು. 2018ರಲ್ಲಿ ರಮೇಶ ಬಲದಿಂದ ಟಿಕೆಟ್‌ ಗಿಟ್ಟಿಸಿಕೊಂಡಿದ್ದರು.

ಬಿಜೆಪಿಯಿಂದ ಭರಮಗೌಡ ಕಾಗೆ ಅವರಿಗೆ ಅವಕಾಶವಿದೆ. ಶ್ರೀಮಂತ ಅವರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನ್ಯಾಯಾಲಯದಿಂದ ದೊರೆತಲ್ಲಿ ಬಿಜೆಪಿಯ ನಡೆ ಏನು ಎನ್ನುವುದನ್ನು ಕಾದುನೋಡಬೇಕಿದೆ. ಜೆಡಿಎಸ್‌ಗೆ ಇಲ್ಲಿ ನೆಲೆ ಇಲ್ಲ.

ವಿಶ್ವಾಸ ಉಳಿಸಿಕೊಳ್ಳಲಿಲ್ಲ:

‘ಸಕ್ಕರೆ ಕಾರ್ಖಾನೆ ಇದೆ. ನೀರಾವರಿ ಯೋಜನೆ ಮೂಲಕ ನೆರವಾಗಿದ್ದಾರೆ ಎಂದು ಜನರು ಶ್ರೀಮಂತ ಪಾಟೀಲ ಅವರನ್ನು ಜನರು ಬೆಂಬಲಿಸಿದ್ದರು. ಬದಲಾವಣೆ ಇರಲೆಂದು ಅವರಿಗೆ ಅವಕಾಶ ಕೊಟ್ಟಿದ್ದರು. ಆದರೆ, ಅವರು ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಲಿಲ್ಲ. ತಮ್ಮ ಕಾರ್ಖಾನೆಗೆ ಕಬ್ಬು ಪೂರೈಸಿದವರಿಗೆ ಬರಬೇಕಾದ ಬಿಲ್‌ ಬಾಕಿಯನ್ನೂ ಕೊಡಲಿಲ್ಲ. ಜನರಿಗೆ ಸುಲಭವಾಗಿ ಸಿಗುತ್ತಿರಲಿಲ್ಲ. ಸಾಂಗ್ಲಿಯಲ್ಲೇ ವಾಸವಿರುತ್ತಾರೆ. ಇಲ್ಲಿಗೆ ಅಪರೂಪಕ್ಕೊಮ್ಮೆ ಬರುತ್ತಾರೆ. ಇದೆಲ್ಲದರಿಂದಲೂ ಜನರಿಗೆ ಅವರ ಬಗ್ಗೆ ಅಸಮಾಧಾನವಿದೆ. ಹೀಗಾಗಿಯೇ ಅವರು ಅನರ್ಹಗೊಂಡಿದ್ದನ್ನು ಸ್ವಾಗತಿಸುತ್ತಿದ್ದಾರೆ’ ಎಂದು ಕ್ಷೇತ್ರದ ನಿವಾಸಿ ಎಸ್. ಹಿರೇಮಠ ಅಭಿಪ್ರಾಯಪಟ್ಟರು.

ಪ್ರತಿಕ್ರಿಯೆಗೆ ಶಾಸಕರು ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.