ಬೆಳಗಾವಿ: ಇಲ್ಲಿನ ಶಾಹೂ ನಗರದಲ್ಲಿ ಶನಿವಾರ ಬೆಳಿಗ್ಗೆ ವಿದ್ಯುತ್ ತಗುಲಿ ಅಜ್ಜ, ಅಜ್ಜಿ ಹಾಗೂ ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಮದುರ್ಗ ತಾಲ್ಲೂಕಿನ ಅರಬೆಂಚಿ ತಾಂಡಾ ಮೂಲದವರಾದ ಈರಪ್ಪ ರಾಠೋಡ, ಶಾಂತವ್ವ ರಾಠೋಡ, 3ನೇ ತರಗತಿ ಓದುತ್ತಿದ್ದ ಅನ್ನಪೂರ್ಣಾ ರಾಠೋಡ ಮೃತಪಟ್ಟವರು.
ಈ ಕುಟುಂಬದವರು ನಿರ್ಮಾಣ ಹಂತದ ಮನೆಗೆ ವಾಚಮನ್ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳಿಂದ ಬೆಳಗಾವಿ ನಗರದಲ್ಲಿ ನೆಲೆಸಿದ್ದರು.
ಶಾಹೂ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ವಾಚಮನ್ ಆಗಿ ಕೆಲಸ ಮಾಡುತ್ತಿದ್ದ ಈರಪ್ಪ ಅವರಿಗೆ ಪಕ್ಕದಲ್ಲೇ ತಗಡಿನ ಶೆಡ್ ಹಾಕಿ ಕೊಡಲಾಗಿತ್ತು.
ಚಾವಣಿಯ ಆಸರೆಗೆ ಕಬ್ಬಿಣದ ಕಂಬಗಳನ್ನು ನಿಲ್ಲಿಸಲಾಗಿದೆ. ಈ ಕಂಬದ ಪಕ್ಕದಲ್ಲೇ ಬಿದ್ದಿದ್ದ ವಿದ್ಯುತ್ ತಂತಿಯನ್ನು ಬಾಲಕಿ ತುಳಿದ್ದಿದ್ದಳು. ಬಾಲಕಿಯ ರಕ್ಷಣೆಗೆ ಬಂದ ಅಜ್ಜ–ಅಜ್ಜಿಯೂ ವಿದ್ಯುತ್ ಪ್ರವಹಿಸಿ ಮೃತಪಟ್ಟಿರಬಹುದು ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಸಿಕ್ಕಿದೆ.
ಸ್ಥಳದಲ್ಲಿ ಕುಟುಂಬದ ಸದಸ್ಯರ ಆಕ್ರಂದನ ಹೇಳತೀರದಾಯಿತು. ಇವರೆಲ್ಲ ಬೇರೆ ಊರಿನಿಂದ ದುಡಿಯಲು ಬಂದಿವರು. ಹೀಗಾಗಿ ನಗರದಲ್ಲಿ ಅವರಿಗೆ ಹೆಚ್ಚಾಗಿ ಯಾರೂ ಪರಿಚಯವಿಲ್ಲ. ಸಂತೈಸಲು ಕೂಡ ಯಾರೂ ಹತ್ತಿರ ಬಾರದಾದರು.
ಸಿಪಿಐ ವಿಶ್ವನಾಥ ಕಬ್ಬೂರು ಸ್ಥಳ ಪರಿಶೀಲನೆ ನಡೆಸಿದರು.
ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.