ಬೆಳಗಾವಿ: ಕಾಡಾನೆಯೊಂದು ಶುಕ್ರವಾರ ಬೆಳ್ಳಂಬೆಳಿಗ್ಗೆ ಬೆಳಗಾವಿ ನಗರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತು.
ಇಲ್ಲಿನ ಶಾಹೂನಗರ, ಬಸವ ಕಾಲೊನಿ, ಸಾವಂತವಾಡಿಯ ಜನ ಅನೆ ಕಂಡು ಅಚ್ಚರಿಗೊಂಡರು. ಬೆಳಿಗ್ಗೆ ಕೆಲಸಕ್ಕೆ ಹೊರಟವರು, ಶಾಲೆ- ಕಾಲೇಜಿಗೆ ಹೊರಟ ಮಕ್ಕಳು ಆನೆ ನೋಡಿ ಖುಷಿಪಟ್ಟರು.
ಗಜರಾಜ ಸೌಮ್ಯವಾಗಿಯೇ ಓಡಾಡುತ್ತಿದೆ. ಇದರಿಂದ ಹಲವರು ಫೋಟೊ, ವಿಡಿಯೊ ಮಾಡಿಕೊಂಡರು.
ಬಸವ ಕಾಲೊನಿಯ ಮನೆಯೊಂದರ ಹಿತ್ತಲಕ್ಕೆ ನುಗ್ಗಿದ ಆನೆ ಹಿತ್ತಲಲ್ಲಿ ನೀರಿಗಾಗಿ ತಡಕಾಡಿತು. ಇದನ್ನು ಕಂಡು ಸುತ್ತಲಿನ ಮನೆಯ ಜನ ಹೊರ ಓಡಿಬಂದರು.
ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಜನರನ್ನು ನಿಯಂತ್ರಿಸಿದರು. ಅನೆ ಹತ್ತಿರ ಹೋಗದಂತೆ, ಗಲಾಟೆ ಮಾಡದಂತೆ ತಿಳಿಸಿದರು.
ಸಿಬ್ಬಂದಿ ಮತ್ತೆ ಅನೆಯನ್ನು ಕಾಡಿನತ್ತ ಕಳುಹಿಸುವ ಕಾರ್ಯಾಚಣೆ ಆರಂಭಿಸಿದ್ದಾರೆ. ಶಬ್ದ ಮಾಡುತ್ತ ಸಾವಂತವಾಡಿ ಕಡೆಗೆ ಓಡಿಸಿದ್ದಾರೆ.
'ಬೆಳಗಾವಿಗೆ ಹತ್ತಿರದಲ್ಲೇ ಕಾಕತಿ ಅರಣ್ಯ ಪ್ರದೇಶವಿದೆ. ಬಹುಶಃ ಆನೆ ಅಲ್ಲಿಂದ ನೀರು, ಆಹಾರ ಹುಡುಕುತ್ತ ಬಂದಿರಬೇಕು. ಅದು ಸೌಮ್ಯವಾಗಿ ನಡೆದುಕೊಂಡಿದೆ. ಯಾವುದೇ ಅಪಾಯ ಇಲ್ಲ. ಮತ್ತೆ ಕಾಡಿಗೆ ಕಳುಹಿಸಲಾಗುತ್ತಿದೆ' ಎಂದು ಸಿಬ್ಬಂದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.