ADVERTISEMENT

ಸಂಸ್ಥಾನ ಲಾಂಛನ: ಪ್ರಮಾದ ಸರಿಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 4:55 IST
Last Updated 3 ಏಪ್ರಿಲ್ 2024, 4:55 IST
ಕಿತ್ತೂರು ಸಂಸ್ಥಾನದ ಲಾಂಛನ
ಕಿತ್ತೂರು ಸಂಸ್ಥಾನದ ಲಾಂಛನ   

ಚನ್ನಮ್ಮನ ಕಿತ್ತೂರು: ‘ಕಿತ್ತೂರು ಸಂಸ್ಥಾನ ಲಾಂಛನದ ಚಿತ್ರ ಬಿಡಿಸುವಲ್ಲಿ ಆಗಿರುವ ಪ್ರಮಾದ ಸರಿಪಡಿಸಬೇಕು. ಹೀಗೆ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು’ ಎಂದು ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಗ್ರಾಮಸ್ಥ ಉಮೇಶ ತೋಟದ ಅವರು, ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಆಗ್ರಹಿಸಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿ ಬದಿಗೆ ಚನ್ನಮ್ಮನ ವರ್ತುಲದ ಬಳಿ ಇರುವ ಮಹಾದ್ವಾರದ ಮಧ್ಯದ ಫಿಲ್ಲರ್ ಮತ್ತು ಗಡಾದ ಮರಡಿಗೆ ತೆರಳುವ ರಸ್ತೆಯ ಮುಖ್ಯದ್ವಾರದ ಗೇಟಿನ ಮೇಲೆ ರಚಿಸಲಾಗಿರುವ ಕಿತ್ತೂರು ಸಂಸ್ಥಾನದ ಲಾಂಛನದಲ್ಲಿ ಪ್ರಮಾದವಾಗಿದೆ’ ಎಂದು ಉಮೇಶ ತೋಟದ ಗಮನ ಸೆಳೆದಿದ್ದಾರೆ.

‘ಸಂಸ್ಥಾನದ ರಾಷ್ಟ್ರಧ್ವಜದ ಲಾಂಛನದಲ್ಲಿ ಮಧ್ಯೆ ನಂದಿ ಮೂರ್ತಿ, ಮೇಲೆ ಅರ್ಧಾಕೃತಿ ಚಂದ್ರ, ಪೂರ್ಣ ಸೂರ್ಯ ಚಿಹ್ನೆ, ಕೆಳಗೆ ಖಡ್ಗ ಮತ್ತು ಎದುರಿಗೆ ಶಿವಲಿಂಗ ಮೂರ್ತಿ ಇರಬೇಕು. ಇದೇ ಸಂಸ್ಥಾನದ ಲಾಂಛನ ಎಂದು ಈಗಾಗಲೇ ಗುರುತಿಸಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

‘ಅರಮನೆಗೆ ಸದಾ ಮಾರ್ಗದರ್ಶನ ನೀಡುತ್ತಿದ್ದ ಗುರುಮನೆ ಆಗಿರುವ ಚೌಕೀಮಠದ ಗೋಡೆ ಮೇಲೆ ಶತಮಾನಗಳ ಹಿಂದೆಯೇ ಈ ಲಾಂಛನ ಇರುವುದನ್ನು ಗಮನಿಸಬಹುದು. ಕಿತ್ತೂರು ಸಂಸ್ಥಾನದ ಬಗ್ಗೆ ಸಂಶೋಧನೆ ಕೈಗೊಂಡಿರುವ ಅನೇಕ ಸಂಶೋಧಕರು ಕಿತ್ತೂರು ಸಂಸ್ಥಾನದ ರಾಷ್ಟ್ರಧ್ವಜದಲ್ಲಿ ಇದೇ ಲಾಂಛನ ಇದೆ ಎಂಬುದನ್ನು ಖಚಿತ ಪಡಿಸಿದ್ದಾರೆ. ಹೀಗಾಗಿ ಎಲ್ಲೆ ಲಾಂಛನ ಪ್ರದರ್ಶಿಸಲಿ ಅಥವಾ ರಚಿಸಲಿ ನಂದಿ ವಿಗ್ರಹ, ಮೇಲೆ ಚಂದ್ರ, ಸೂರ್ಯ ಚಿಹ್ನೆ, ಕೆಳಗೆ ಖಡ್ಗ ಮತ್ತು ಮುಂದೆ ಶಿವಲಿಂಗ ಇರಲೇಬೇಕು. ಕಿತ್ತೂರು ಪ್ರಾಧಿಕಾರದ ವತಿಯಿಂದ ಮಹಾದ್ವಾರದ ಮಧ್ಯೆದ ಕಂಬದ ಮೇಲೆ ಮತ್ತು ಲೋಕೋಪಯೋಗಿ ಇಲಾಖೆ ಅಥವಾ ಗುತ್ತಿಗೆದಾರನಿಂದ ಗಡಾದ ಮರಡಿಗೆ ಹೋಗುವ ಮುಖ್ಯಗೇಟಿನ ಮೇಲೆ ಚಿತ್ರಿಸಿರುವ ಲಾಂಛನ ಸರಿಪಡಿಸಬೇಕು’ ಎಂದು ಅವರು ಆಗ್ರಹಿಸಿದರು.

ಗಡಾದ ಮರಡಿ ಮುಖ್ಯ ಗೇಟಿನ ಮೇಲೆ ಶಿವಲಿಂಗ ಚಿತ್ರವಿಲ್ಲದೆ ರಚನೆ ಮಾಡಿರುವ ಲಾಂಛನ

Quote - ನಂದಿ ವಿಗ್ರಹ ಚಿತ್ರ ಮೇಲೆ ಅರ್ಧ ಚಂದ್ರಾಕೃತಿ ಸೂರ್ಯ ಚಿಹ್ನೆ ನಂದಿ ಚಿತ್ರದ ಕೆಳಗೆ ಖಡ್ಗ ಮತ್ತು ಎದುರುಗಡೆ ಶಿವಲಿಂಗ ಮೂರ್ತಿ ಚಿತ್ರ ಇರಬೇಕು. ಇದು ಕಿತ್ತೂರು ಸಂಸ್ಥಾನದ ಲಾಂಛನ. ಇದೇ ರೀತಿ ಇರುವುದು ಸರಿಯಾದ ಕ್ರಮ –ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ರಾಜಗುರು ಸಂಸ್ಥಾನ ಕಲ್ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.