ಖಾನಾಪುರ: ಪಟ್ಟಣದ ಅರಣ್ಯ ಇಲಾಖೆ ವಿಶ್ರಾಂತಿ ಗೃಹದ ಆವರಣದಲ್ಲಿ ಅಸಂಖ್ಯಾತ ತೊಗಲು ಬಾವಲಿಗಳು ವಾಸವಾಗಿವೆ.
ಇಲ್ಲಿನ ಹತ್ತಾರು ಮರಗಳಲ್ಲಿ ಬೀಡುಬಿಟ್ಟಿರುವ ತೊಗಲು ಬಾವಲಿಗಳು ರೈತಮಿತ್ರ ಹಾಗೂ ಪರಿಸರ ಸ್ನೇಹಿಗಳು ಎಂದೇ ಚಿರಪರಿಚಿತ. ಇವು ರಾತ್ರಿಯಿಡೀ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕೃಷಿ ಜಮೀನುಗಳಿಗೆ ತೆರಳುತ್ತವೆ. ಕ್ರಿಮಿಕೀಟಗಳು, ಕಸ-ಕಡ್ಡಿಗಳನ್ನು ತಿಂದು ನಸುಕಿನಲ್ಲಿ ಮತ್ತೆ ಸ್ವಸ್ಥಾನಕ್ಕೆ ಮರಳುತ್ತವೆ. ಮುಂಜಾನೆಯಿಂದ ಸಂಜೆಯವರೆಗೆ ಈ ಮರಗಳಲ್ಲೇ ಅವು ನೇತಾಡುತ್ತಿವೆ.
ತೊಗಲು ಬಾವಲಿಗಳು ಒಮ್ಮೆಯೇ ನೆಲಕ್ಕೆ ತಾಗಿದರೆ ಮತ್ತೆ ಮೇಲೆ ಹಾರಲು ಆಗುವುದಿಲ್ಲ. ಅವುಗಳಿಗೆ ನೆಲದ ಮೇಲಿನ ನೀರು ಕುಡಿಯಲು ಆಗುವುದಿಲ್ಲ. ಹಾಗಾಗಿ ಅರಣ್ಯ ಇಲಾಖೆಯೇ ಪ್ರತ್ಯೇಕವಾಗಿ ಮಣ್ಣಿನ ಮಡಿಕೆಗಳನ್ನು ತರಿಸಿ, ಎತ್ತರದ ಸ್ಥಳಗಳಲ್ಲಿ ಇಟ್ಟಿದೆ. ಅಲ್ಲಿನ ನೀರನ್ನೇ ನಿತ್ಯವೂ ಸೇವಿಸಿ ಬಾವಲಿಗಳು ದಾಹ ನೀಗಿಸಿಕೊಳ್ಳುತ್ತಿವೆ. ಸಾಮಾನ್ಯವಾಗಿ ಯಾರ ತಂಟೆಗೂ ಹೋಗದೇ, ತಮ್ಮ ಪಾಡಿಗೆ ತಾವು ಜೀವಿಸುತ್ತವೆ.
ಪ್ರಸ್ತುತ ದಿನಗಳಲ್ಲಿ ಅರಣ್ಯ ನಾಶ ಹೆಚ್ಚುತ್ತಿದೆ. ಅವು ಸ್ವಚ್ಛಂದವಾಗಿ ವಿಹರಿಸಲು ಅವಶ್ಯವಿರುವ ಕಾಡಿನ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾಗಿ ವಿಧಿಯಿಲ್ಲದೆ ಪಟ್ಟಣದ ಜನನಿಬಿಡ ಸ್ಥಳದಲ್ಲೇ ತಂಗಿವೆ. ಅವುಗಳ ವೀಕ್ಷಣೆಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಪ್ರವಾಸಿಗರು, ಸಂಶೋಧಕರು ಬರುತ್ತಾರೆ.
‘ಹತ್ತಾರು ವರ್ಷಗಳಿಂದ ತೊಗಲು ಬಾವಲಿಗಳು ಇಲ್ಲಿ ಬೀಡುಬಿಟ್ಟಿವೆ. ಚಿಣ್ಣರ ವನದರ್ಶನ ಕಾರ್ಯಕ್ರಮದಡಿ ಶೈಕ್ಷಣಿಕ ಪ್ರವಾಸಕ್ಕೆ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಇಲ್ಲಿಗೆ ಭೇಟಿ ನೀಡುವವರು ತೊಗಲು ಬಾವಲಿಗಳಿಗೆ ಯಾವುದೇ ತೊಂದರೆ ನೀಡಬಾರದು. ಪರಿಸರ ಸ್ನೇಹಿಯಾಗಿ ವರ್ತಿಸಬೇಕು’ ಎಂದು ಖಾನಾಪುರ ನಗರದ ಉಪ ವಲಯ ಅರಣ್ಯಾಧಿಕಾರಿ ವಿನಾಯಕ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.