ರಾಯಬಾಗ: ತಾಲ್ಲೂಕಿನಲ್ಲಿ ಕಬ್ಬು ನುರಿಯುವ ಹಂಗಾಮು ಜೋರಾಗಿಯೇ ಪ್ರಾರಂಭಗೊಂಡಿದೆ. ಕಬ್ಬು ಸಾಗಾಟದ ವಾಹನಗಳು ಎಲ್ಲ ಸಂಚಾರ ನಿಯಮಗಳನ್ನು ಗಾಳಿಗೆ ತೂರಿದರೂ ಕೇಳುವವರು ಇಲ್ಲದಂತಾಗಿದೆ.
ತಮ್ಮ ವಾಹನಗಳ ಸಾಮರ್ಥ್ಯಕ್ಕಿಂತ ಹೆಚ್ಚು ಕಬ್ಬು ತುಂಬಿಕೊಂಡು ಹೋಗುವ ಟ್ರ್ಯಾಕ್ಟರ್‌ಗಳು, ಲಾರಿಗಳು ವೇಗವಾಗಿ ಚಲಿಸುವುದರಿಂದ ರಸ್ತೆಗಳಲ್ಲಿ ಚಲಿಸುವ ದ್ವಿಚಕ್ರ ವಾಹನ ಸವಾರರಿಗೆ, ಪಾದಚಾರಿಗಳಿಗೆ, ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ.
ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಜೋರಾಗಿಯೇ ಪ್ರಾರಂಭಗೊಂಡಿದ್ದು, ಪ್ರಾರಂಭವಾಗುವ ಮುನ್ನವೇ ಮುಗಿಯುವುದಾರೂ ಯಾವಾಗ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳಿವೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಬ್ಬು ತುಂಬಿಕೊಂಡು ಹೋಗುವ ವಾಹನಗಳ ಮೇಲೆ ವೇಗದ ನಿಯಂತ್ರಣ ನಿರ್ಬಂಧ, ಸಾಮರ್ಥ್ಯವಿದ್ದಷ್ಟು ಕಬ್ಬು ತುಂಬುವ ನಿರ್ಬಂಧ ಹಾಕಲು ಕಾರ್ಖಾನೆಯವರು ಮುಂದಾಗಬೇಕು ಎಂಬ ಒತ್ತಾಯ ಸಂದೀಪ ವಂಟಮೂರೆ ಅವರದು.
ಶಬ್ದ ಮಾಲಿನ್ಯಕ್ಕೆ ಬೇಕಿದೆ ಕಡಿವಾಣ: ಶಬ್ದ ಮಾಲಿನ್ಯ ನಿಯಂತ್ರಣವನ್ನು ಸಾಮಾನ್ಯವಾಗಿ ತಾಲ್ಲೂಕು ಆಡಳಿತದ ವ್ಯಾಪ್ತಿಗೆ ಬಂದರೂ ಪೊಲೀಸರು ಇದಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ.
ಕಬ್ಬಿನ ಸಾಗಾಟದ ಟ್ರ್ಯಾಕ್ಟರ್‌ಗಳಲ್ಲಿನ ಕರ್ಕಶ ಶಬ್ದಕ್ಕೆ ಸಾರ್ವಜನಿಕರ ತೀವ್ರ ವಿರೋಧವಿದೆ. ವಾಹನ ಚಾಲಕರನ್ನು ಒಂದೆಡೆ ಸೇರಿಸಿ ಈ ಬಗ್ಗೆ ಎಚ್ಚರಿಕೆ ನೀಡಬೇಕಿದೆ. ನಿಯಮ ಉಲ್ಲಂಘಿಸಿದರೆ ದಂಡ ಹಾಕಬೇಕು ಎಂಬುದು ಜನರ ಒತ್ತಾಯ.
ಪ್ರತಿ ದಿನ ಬೆಳಿಗ್ಗೆ 9.30 ರಿಂದ 10.30ರವರೆಗೆ ಶಾಲೆಗಳು ಆರಂಭವಾಗುವ ಸಮಯ. ಸಂಜೆ 4.15 ರಿಂದ 5.30ರವರೆಗೆ ಶಾಲೆ ಬಿಡುವ ವೇಳೆ. ಈ ಅವಧಿಯಲ್ಲಿ ಟ್ರಕ್ ಮತ್ತು ಟ್ರ್ಯಾಕ್ಟರ್‌ಗಳ ಮೂಲಕ ಕಬ್ಬು ಸಾಗಣೆ ನಿಲ್ಲಿಸಬೇಕು. ಪ್ರತಿಯೊಂದು ಟ್ರ್ಯಾಕ್ಟರ್ ಟ್ರೇಲರ್ ಮತ್ತು ಎತ್ತಿನ ಗಾಡಿಗಳಿಗೆ ಕಡ್ಡಾಯವಾಗಿ ಕೆಂಪು ರೇಡಿಯಂ ಹಚ್ಚಲು ಸಕ್ಕರೆ ಕಾರ್ಖಾನೆಗಳಿಗೆ ಆದೇಶಿಸಬೇಕು ಎಂಬುದು ಕರ್ನಾಟಕ ಯುವ ವೇದಿಕೆಯ ಅಧ್ಯಕ್ಷ ಅನಿಲ ಕೊರವಿ ಒತ್ತಾಯ.
ರಸ್ತೆ ಕೆಟ್ಟರೆ ಕಾರಣ ಯಾರು?: ಮಿತಿಗಿಂತ ಹೆಚ್ಚು ಕಬ್ಬು ತುಂಬಿಕೊಂಡು ಬರುವ ವಾಹನಗಳಿಂದಾಗಿ ರಸ್ತೆಗಳು ಕಿತ್ತುಹೋಗಿವೆ. ಆದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಾರ್ಖಾನೆಯ ಮಾಲೀಕರಿಗೆ ಹೆದರಿ ಕಣ್ಮುಚ್ಚಿ ಕುಳಿತಿದ್ದಾರೆ.
ಹದಗೆಟ್ಟ ರಸ್ತೆಗೆ ಯಾರು ಹೊಣೆ ಎಂಬ ಪ್ರಶ್ನೆಗೆ ಕರ್ಖಾನೆಗಳ ಮಾಲೀಕರಾಗಲಿ, ಅಧಿಕಾರಿಗಳಾಗಲಿ, ಚಾಲಕರಾಗಲಿ, ಪೊಲೀಸರಾಗಲಿ ಉತ್ತರ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.