ಬೆಳಗಾವಿ: ಟ್ರಾನ್ಸ್‌ಫಾರ್ಮರ್ ಮಾದರಿಯಲ್ಲಿ ಸಿದ್ಧಪಡಿಸಿದ ಬಾಕ್ಸ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 10 ಲಕ್ಷ ಮೌಲ್ಯದ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
₹ 20 ಲಕ್ಷ ಬೆಲೆಬಾಳುವ ಎರಡು ವಾಹನಗಳು ಸೇರಿ ಒಟ್ಟು ₹30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಎರಡು ಕಂಟೇನರ್‌ಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳನ್ನು ಸಾಗಿಸಲಾಗುತ್ತಿದೆ ಎಂಬ ರೀತಿಯಲ್ಲಿ ಬಾಕ್ಸ್‌ಗಳನ್ನು ಹೇರಲಾಗಿತ್ತು. ಬಾಕ್ಸ್ ಒಡೆದು ನೋಡದ ಹೊರತಾಗಿ ಅದರಲ್ಲಿ ಮದ್ಯವಿದೆ ಎಂಬುದರ ಸುಳಿವೂ ಸಿಗದಂತೆ ಮಾಡಲಾಗಿತ್ತು. ಈ ವಾಹನ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಬಳಿ ಬಂದಾಗ ಅಬಕಾರಿ ಅಧಿಕಾರಿಗಳು ತಪಾಸಣೆಗೆ ಇಳಿದರು. ಆಗ ಗೋವಾದಿಂದ ತೆಲಂಗಾಣಕ್ಕೆ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಮದ್ಯ ಪತ್ತೆಯಾಯಿತು.
ಕಂಟೇನರ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡಲಾಗುತ್ತಿದೆ ಎಂಬ ಸುಳಿವು ಸಿಕ್ಕಿತ್ತು. ಅಬಕಾರಿ ಎಸ್ಪಿ ವಿಜಯಕುಮಾರ ಹಿರೇಮಠ ಅವರ ನೇತೃತ್ವದ ಅಬಕಾರಿ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿದೆ ಎಂದು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ತಿಳಿಸಿದರು.
ಕೆಲವೇ ದಿನಗಳ ಹಿಂದೆ ಫ್ಲೈವುಡ್ ಜೋಡಿಸಿ, ಅದರಡಿಯಲ್ಲಿ ಮದ್ಯದ ಬಾಟಲಿಗಳನ್ನು ಇಟ್ಟು ಸಾಗಿಸುತ್ತಿದ್ದ ಲಾರಿಯನ್ನೂ ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಸಿನಿಮೀಯ ರೀತಿಯಲ್ಲಿ ಯಾರಿಗೂ ಅನುಮಾನ ಕೂಡ ಬಾರದಂತೆ ಸಿದ್ಧತೆ ಮಾಡಿಕೊಂಡು ಮದ್ಯ ಸಾಗಣೆ ಮಾಡಲಾಗುತ್ತಿತ್ತು. ಈಗ ಆರೋಪಿಗಳು ಮತ್ತೊಂದು ಮಾರ್ಗ ಅನುಸರಿಸಿ, ನಮ್ಮ ಕಣ್ಣು ತಪ್ಪಿಸಲು ಯತ್ನಿಸಿದ್ದಾರೆ. ಆದರೆ, ಚಾಣಾಕ್ಷ ನಡೆಯಿಂದ ಈ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಸಂಬಂಧವಿಲ್ಲ ಎಂದ ಮಾಲೀಕರು: ಎರಡೂ ವಾಹನಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬ್ರಾಂಡ್‌ಗಳ ಮದ್ಯದ ಬಾಟಲಿಗಳಿದ್ದು, ವಶಕ್ಕೆ ಪಡೆಯಲಾಗಿದೆ. ಚಾಲಕ ಮಹಾರಾಷ್ಟ್ರದ ಶ್ರೀರಾಮ್ ಎಂಬಾತನನ್ನು ಬಂಧಿಸಲಾಗಿದೆ. ವಾಹನದಲ್ಲಿ ಮದ್ಯ ಸಾಗಣೆ ಮಾಡುತ್ತಿರುವ ವಿಷಯ ಚಾಲಕನಿಗೂ ತಿಳಿದಿರಲಿಲ್ಲ ಎಂದೂ ಅವರು ಮಾಹಿತಿ ನೀಡಿದರು.
‘ಮದ್ಯ ಮಾರಾಟ ಮಾಡಿದ ಮಾಲೀಕರನ್ನು ಹುಡುಕಿ ವಿಚಾರಣೆ ಮಾಡಲಾಗಿದೆ. ಆದರೆ, ಮದ್ಯ ಮಾರುವುದು ಮಾತ್ರ ನಮ್ಮ ಕೆಲಸ. ಖರೀದಿದಾರರು ಹೇಗೆ ಸಾಗಿಸುತ್ತಾರೆ, ಎಲ್ಲಿಗೆ ಸಾಗಿಸುತ್ತಾರೆ ಎಂಬುದು ನಮಗೆ ತಿಳಿದಿಲ್ಲ’ ಎಂಬ ಉತ್ತರ ನೀಡಿದ್ದಾರೆ’ ಎಂದೂ ಅವರು ವಿವರಿಸಿದರು.
ಅಬಕಾರಿ ಜಂಟಿ ಆಯುಕ್ತ ಫಿರೋಜ್ ಖಾನ್ ಕಿಲ್ಲೇದಾರ, ಉಪ ಆಯುಕ್ತೆ ವನಜಾಕ್ಷಿ ಅವರ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕ ರವಿ ಮುರುಗೋಡ, ಇನ್‌ಸ್ಪೆಕ್ಟರ್‌ಗಳಾದ ರವೀಂದ್ರ ಹೊಸಳ್ಳಿ ಹಾಗೂ ಮಲ್ಲೇಶ್ ಉಪ್ಪಾರ್, ಸಿಬ್ಬಂದಿ ತಂಡ ಈ ಕಾರ್ಯಾಚರಣೆ ನಡೆಸಿದೆ.
ಮದ್ಯವಿದ್ದ ವಾಹನ ಸಿಕ್ಕಿಬಿದ್ದ ತಕ್ಷಣ ದಂಧೆಕೋರರು ಜಿಪಿಎಸ್ ಲಾಕ್ ಬಳಸಿ ವಾಹನದ ಎಂಜಿನ್ ಬಂದ್ ಮಾಡಿದರು. ತಾಂತ್ರಿಕ ಸಿಬ್ಬಂದಿ ಕರೆಯಿಸಿ ಈ ಲಾಕರ್ ತೆಗೆದು, ವಾಹನವಕ್ಕೆ ಸ್ಥಳಕ್ಕೆ ತರಲು ಅಧಿಕಾರಿಗಳಿಗೆ ಎರಡೂವರೆ ತಾಸು ಹಿಡಿಯಿತು.
ಈ ರೀತಿ ಅಕ್ರಮ ಮದ್ಯದ ದಂಧೆ ಮಾಡುವವರು ಇನ್ನೊಂದು ವಾಹನದಲ್ಲಿ ಲಾರಿಯನ್ನು ಹತ್ತಿರದಿಂದ ಹಿಂಬಾಲಿಸುತ್ತಾರೆ. ಪೊಲೀಸರಿಗೆ ಸಿಕ್ಕಿಬಿದ್ದ ತಕ್ಷಣ ವಾಹನ ಎಳೆದೊಯ್ಯದಂತೆ ಆ್ಯಪ್ ಬಳಸಿ, ಜಿಇಎಸ್ ಮೂಲಕ ಲಾಕ್ ಮಾಡುತ್ತಾರೆ. ಮಂಗಳವಾರ ಕೂಡ ಇಂಥದ್ದೇ ಪ್ರಯೋಗ ಮಾಡಿದ್ದಾರೆ. ಇಂಥ ಅಪರಾಧ ನಿಯಂತ್ರಣಕ್ಕಾಗಿ ನಮ್ಮ ಸಿಬ್ಬಂದಿಯೂ ತರಬೇತಿ ನೀಡಲಾಗುತ್ತಿದೆ ಎಂದು ಅಬಕಾರಿ ಅಧಿಕಾರಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.