ಬೆಳಗಾವಿ: ಒಣದ್ರಾಕ್ಷಿ (ಮನುಕ) ದರ ತೀವ್ರ ಕುಸಿದ ಕಾರಣ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗೆ ಹಾಕಿದಷ್ಟು ಹಣ ಕೂಡ ವಾಪಸ್ ಬರದಂಥ ಸ್ಥಿತಿ ನಿರ್ಮಾಣವಾಗಿದೆ. ಸಹಜವಾಗಿಯೇ ರೈತರು ಈಗ ಸರ್ಕಾರದತ್ತ ಕೈಚಾಚಿ ನಿಂತಿದ್ದಾರೆ. ದ್ರಾಕ್ಷಿಯನ್ನು ಬೆಂಬಲ ಬೆಲೆ ಅಡಿ ಖರೀದಿ ಮಾಡಬೇಕು, ಸಾಲ ಮನ್ನಾ ಮಾಡಬೇಕು ಎಂಬ ಎರಡು ಮುಖ್ಯ ಬೇಡಿಕೆಗಳನ್ನು ಇಟ್ಟಿದ್ದಾರೆ.
ಕಳೆದ ವರ್ಷ ಪ್ರತಿ ಕೆ.ಜಿ ಒಣದ್ರಾಕ್ಷಿಗೆ ₹190ರಿಂದ ₹210 ದರ ಇತ್ತು. ಆದರೆ, ಈ ವರ್ಷ ₹110ಕ್ಕೆ ಕುಸಿದಿದೆ. ಆದರೆ, ಒಂದು ಕೆ.ಜಿ ಒಣದ್ರಾಕ್ಷಿ ಸಿದ್ಧವಾಗಬೇಕೆಂದರೆ ₹130ರಿಂದ ₹140 ವೆಚ್ಚವಾಗುತ್ತಿದೆ. ಸದ್ಯದ ಮಾರುಕಟ್ಟೆ ದರದಂತೆ ಮಾರಾಟವಾದರೆ ರೈತರಿಗೆ ಪ್ರತಿ ಕೆಜಿಗೆ ₹20ರಿಂದ ₹30ರಷ್ಟು ನಷ್ಟವಾಗುತ್ತದೆ.
ಇಂಥ ದಯನೀಯ ಸ್ಥಿತಿಯಲ್ಲಿ ರೈತರು ಬದುಕುವುದು ಹೇಗೆ? ದ್ರಾಕ್ಷಿಗಾಗಿ ಮಾಡಿದ ಸಾಲ ತೀರುವುದು ಹೇಗೆ? ಬಡ್ಡಿ ಕಟ್ಟುವುದು ಹೇಗೆ? ಎಂಬ ಪ್ರಶ್ನೆಗಳು ಇಡೀ ರೈತ ಕುಟುಂಬವನ್ನೇ ಕಾಡುತ್ತಿವೆ.
ಒಂದು ಎಕರೆ ದ್ರಾಕ್ಷಿ ಬಿತ್ತಿ, ಬೆಳೆದು, ಫಸಲು ತೆಗೆಯಬೇಕೆಂದರೆ ವರ್ಷಕ್ಕೆ ಕನಿಷ್ಠ ₹2.5 ಲಕ್ಷದಿಂದ ₹ 3 ಲಕ್ಷ ವೆಚ್ಚವಾಗುತ್ತದೆ. ಸದ್ಯ ಜಿಲ್ಲೆಯಲ್ಲಿ ಬೆಳೆಯುತ್ತಿರುವ ದ್ರಾಕ್ಷಿ ಪ್ರಮಾಣದಲ್ಲಿ ಶೇ 20ರಷ್ಟು ಮಾತ್ರ ತಿನ್ನಲು ಸರಬರಾಜು ಆಗುತ್ತಿದೆ. ಉಳಿದ ಶೇ 80ರಷ್ಟನ್ನು ಒಣದ್ರಾಕ್ಷಿ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಹೀಗಾಗಿ, ಸದ್ಯ ಬಿದ್ದುಹೋದ ದರದಿಂದಾಗಿ ಪ್ರತಿಯೊಬ್ಬ ದ್ರಾಕ್ಷಿ ಬೆಳೆಗಾರರಿಗೂ ಊಹಿಸಲಾರದಷ್ಟು ನಷ್ಟ ಉಂಟಾಗುತ್ತದೆ.
ಈ ಬಾರಿ ಸುರಿದ ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ ಹಣ್ಣು ಉದುರಿ, ಕೊಳೆತು ನಷ್ಟ ಉಂಟಾಗಿತ್ತು. ಸದ್ಯ ಒಣದ್ರಾಕ್ಷಿಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಕರೆಗೆ ₹3 ಲಕ್ಷ ವೆಚ್ಚ ಮಾಡಿದರೆ ಮರಳಿ ಬಂದಿದ್ದು ಕೇವಲ ₹1.5 ಲಕ್ಷದಿಂದ ₹ 2 ಲಕ್ಷ ಮಾತ್ರ. ಪ್ರಸಕ್ತ ವರ್ಷದ ಬೆಳವಣಿಗೆ ರೈತರನ್ನು ಇನ್ನಷ್ಟು ಸಾಲದ ಸುಳಿಗೆ ನೂಕಿದೆ ಎನ್ನುತ್ತಾರೆ ರೈತರು.
ರಾಜ್ಯದಲ್ಲಿ ಎರಡನೇ ಸ್ಥಾನ: ಅಥಣಿ ತಾಲ್ಲೂಕು ರಾಜ್ಯದಲ್ಲಿಯೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಪ್ರದೇಶ. ಮೊದಲ ಸ್ಥಾನದಲ್ಲಿ ವಿಜಯಪುರ ತಾಲ್ಲೂಕು ಇದೆ. ಜಿಲ್ಲಾ ವ್ಯಾಪ್ತಿಯನ್ನು ಪರಿಗಣಿಸಿದರೆ ಬೆಳಗಾವಿ ಎರಡನೇ ಸ್ಥಾನದಲ್ಲಿದ್ದು, ವಿಜಯಪುರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಏತ ನೀರಾವರಿ ಯೋಜನೆಗಳು ಬೆಳೆದ ಪರಿಣಾಮ ದ್ರಾಕ್ಷಿ ಬೆಳೆಯುವವರ ಸಂಖ್ಯೆ ಹೆಚ್ಚುತ್ತ ಸಾಗಿದೆ. ನದಿ ದಡದಲ್ಲಿ ಕಬ್ಬು ಮುಖ್ಯ ಬೆಳೆಯಾಗಿದ್ದರೆ, ಮಡ್ಡಿ ಪ್ರದೇಶವೆಲ್ಲ ಈಗ ದ್ರಾಕ್ಷಿಮಯವಾಗಿದೆ.
ವಿಚಿತ್ರವೆಂದರೆ, ಒಣದ್ರಾಕ್ಷಿ ಸಂಸ್ಕರಣೆ ಮಾಡುವ ಅವಧಿಯಲ್ಲಿ ಪ್ರಕೃತಿ ವಿಕೋಪದಿಂದ ಯಾವುದೇ ಹಾನಿ ಸಂಭವಿಸಿದರೂ ಪರಿಹಾರ ಸಿಗುವುದಿಲ್ಲ. ಈ ಅವಧಿಯಲ್ಲಿ ಬೆಳೆವಿಮೆ ಮಾಡುವುದಕ್ಕೂ ಸಾಧ್ಯವಿಲ್ಲ. ಮಾರ್ಚ್, ಏಪ್ರಿಲ್‌ನಲ್ಲಿ ದ್ರಾಕ್ಷಿ ಒಣಗಿಸುವ ಪ್ರಕ್ರಿಯೆ ಸಾಮಾನ್ಯ. ಆದರೆ, ಪ್ರತಿ ವರ್ಷ ಇದೇ ಅವಧಿಯಲ್ಲಿ ಮಳೆ ಬಂದು ಸಾಕಷ್ಟು ಹಾನಿ ಸಂಭವಿಸುತ್ತಿದೆ.
ಮತ್ತೆ ಹಲವು ಸಂಸ್ಕೃರಣೆ ಮಾಡಿ ಮುಗಿದಿದ್ದರೂ ಬೆಲೆ ಸಿಗುವುದಿಲ್ಲ. ಬಹಳಷ್ಟು ದಿನ ಕಾಯ್ದು ಇಟ್ಟುಕೊಳ್ಳುವುದಕ್ಕೂ ಸಾಧ್ಯವಿಲ್ಲ. ಈ ಎಲ್ಲ ಕಾರಣಗಳಿಂದಾಗಿ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.