ADVERTISEMENT

ಬೆಳಗಾವಿ: ಸುಳ್ಳು ದೂರು; ಸೆಸ್ಕ್‌–ಹೆಸ್ಕಾಂ ಅಧಿಕಾರಿಗಳು ಸೇರಿ 13 ಮಂದಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 16:00 IST
Last Updated 25 ಜೂನ್ 2024, 16:00 IST
   

ಬೆಳಗಾವಿ: ಇಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಮೇಲಾಧಿಕಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸುಳ್ಳು ದೂರು ನೀಡಿದ ಮಹಿಳೆ ಸೇರಿ 13 ಜನರನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯವು ಅಪರಾಧಿಗಳೆಂದು ತೀರ್ಪು ನೀಡಿದೆ.

2014ರಲ್ಲಿ ಹೆಸ್ಕಾಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಸದ್ಯ ಮೈಸೂರಿನ ‘ಸೆಸ್ಕ್‌’ ಸಹಾಯಕ ಎಂಜಿನಿಯರ್‌ ಆಗಿರುವ ಬಿ.ವಿ ಸಿಂಧು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಜಿತ್‌ ಪೂಜಾರಿ, ಕಿರಿಯ ಎಂಜಿನಿಯರ್‌ ಸುಭಾಸ ಹಲ್ಲೊಳ್ಳಿ, ಮೇಲ್ವಿಚಾರಕ ಮಲ್ಲಿಕಾರ್ಜುನ ರೇಡಿಹಾಳ, ಮಾರ್ಗದಾಳು ಈರಪ್ಪ ಪತ್ತಾರ, ಸಹಾಯಕ ಮಾರ್ಗದಾಳುಗಳಾದ ನಾಥಾಜಿ ಪಾಟೀಲ, ಮಲ್ಲಸರ್ಜ ಶಹಾಪೂರಕರ, ಹಿರಿಯ ಸಹಾಯಕ ಭೀಮಪ್ಪ ಗೋಡಲಕುಂದರಗಿ, ಅಟೆಂಡರ್ ರಾಜೇಂದ್ರ ಹಳಿಂಗಳಿ, ಲೆಕ್ಕಾಧಿಕಾರಿ ಸುರೇಶ ಕಾಂಬಳೆ, ಲೈನ್‌ಮನ್‌ಗಳಾದ ಈರಯ್ಯ ಹಿರೇಮಠ, ಮಾರುತಿ ಪಾಟೀಲ ಹಾಗೂ ನಿವೃತ್ತ ಸಹಾಯಕಿ ದಾಕ್ಷಾಯಿಣಿ ಮಹಾದೇವ ನೇಸರಗಿ ಶಿಕ್ಷೆಗೆ ಒಳಗಾದವರು.

ಆಗ ಹೆಸ್ಕಾಂನಲ್ಲಿ ಅಧೀಕ್ಷಕ ಎಂಜಿನಿಯರ್‌ ಆಗಿದ್ದ ತುಕಾರಾಮ ಬಾಳೇಶಿ ಮಜ್ಜಗಿ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಹೋದ್ಯೋಗಿ ಬಿ.ವಿ.ಸಿಂಧು ಮಾಳಮಾರುತಿ ಠಾಣೆಯಲ್ಲಿ ದಾಖಲಿಸಿದ್ದರು. ಎಲ್ಲ 13 ಆರೋಪಿಗಳು ಮುಂದಾಗಿ ಮಹಿಳೆಯ ಕಡೆಯಿಂದ ದೂರು ಕೊಡಿಸಿದ್ದರು.

ADVERTISEMENT

ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಆದರೆ, ತುಕಾರಾಮ ಮಜ್ಜಗಿ ಅವರು ಜೀವ ಬೆದರಿಕೆ ಹಾಕಿ ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ ಎಂದು 2015ರಲ್ಲಿ ಮತ್ತೊಂದು ದೂರು ದಾಖಲಿಸಲಾಗಿತ್ತು. ಕೆಲ ದಿನಗಳ ಬಳಿಕ ಮಹಿಳೆ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಬಗ್ಗೆ ಮೂರನೇ ದೂರು ದಾಖಲಾಗಿತ್ತು. ಎಲ್ಲದರ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮತ್ತೂ ‘ಬಿ’ ರಿಪೋರ್ಟ್‌ ಸಲ್ಲಿಸಿದ್ದರು.

‘ದೂರು ದಾಖಲಿಸಿದ್ದ ಮಹಿಳೆ 2016ರಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿ ‘9 ಜನರೇ ಸುಳ್ಳು ದೂರು ನೀಡುವಂತೆ ತಮ್ಮನ್ನು ಪ್ರೇರೇಪಿಸಿದ್ದರು’ ಎಂದು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು.

ಸುಳ್ಳು ದೂರು ದಾಖಲಿಸಿ ಅಮಾಯಕರ ಮಾನ ಹಾನಿ ಮಾಡಿದ ಬಗ್ಗೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 13 ಆರೋಪಿಗಳು ಪ್ರಕರಣ ರದ್ದು ಮಾಡುವಂತೆ ಹೈಕೋರ್ಟ್‌ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಲ್‌.ವಿಜಯಲಕ್ಷ್ಮಿ ದೇವಿ ಅವರು, ಸಂಚು ರೂಪಿಸಿದ 13 ಮಂದಿಯನ್ನೂ ದೋಷಿಗಳು ಎಂದು ಆದೇಶ ನೀಡಿದ್ದಾರೆ. ಜೂನ್‌ 27ಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ.

ಸರ್ಕಾರದ ಪರ ವಿಶೇಷ ಅಭಿಯೋಜಕ ಮುರಳೀಧರ ಕುಲಕರ್ಣಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.