ಖಾನಾಪುರ: ‘ಮಿದುಳು ಜ್ವರದಿಂದ ಬಳಲುತ್ತಿರುವ ಪುತ್ರನನ್ನು ಕಾಪಾಡು ದೇವರೇ...’ ಎಂದು ತಾಲ್ಲೂಕಿನ ನಂದಗಡದ ದಂಪತಿಯೊಬ್ಬರು ಏಸುವಿನ ಮೊರೆಹೋಗಿದ್ದಾರೆ.
ನಂದಗಡ ಗ್ರಾಮದ ಹೊರವಲಯದ ಬೆಟ್ಟದ ಮೇಲಿರುವ ಏಸುಕ್ರಿಸ್ತನ ಶಿಲುಬೆ ಮುಂದೆ ಮಂಗಳವಾರ ಬಾಲಕನನ್ನು ಮಲಗಿಸಲಾಗಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ದಂಪತಿಯ ಕಷ್ಟ ವಿಚಾರಿಸಿದರು. ‘ಬಾಲಕನಿಗೆ ಮಾರಣಾಂತಿಕ ಕಾಯಿಲೆ ಇದ್ದು, ದೇವರೇ ಕಾಪಾಡುತ್ತಾನೆ ಎಂದು ಇಲ್ಲಿಗೆ ಬಂದಿದ್ದಾಗಿ’ ದಂಪತಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ನಿವಾಸಿಗಳಾದ ಕೃಷ್ಣ ಸುತ್ರಾವೆ ಹಾಗೂ ಅಂಬಾ ದಂಪತಿಯ 8 ವರ್ಷದ ಪುತ್ರಶೈಲೇಶ ಮಿದುಳು ಜ್ವರದಿಂದಾಗಿ ಪಾರ್ಶ್ವವಾಯು ಪೀಡಿತನಾಗಿದ್ದಾನೆ. ಹಲವು ಆಸ್ಪತ್ರೆಗಳಿಗೆ ಹೋಗಿ, ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಲಕ್ಷಾಂತರ ಹಣ ವ್ಯಯಿಸಿದ್ದಾರೆ. ಆದರೆ, ಇತ್ತೀಚೆಗೆ ಬಾಲಕನ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ವೈದ್ಯರೂ ಕೈಚೆಲ್ಲಿದ್ದಾರೆ. ಇದರಿಂದ ದಿಕ್ಕು ತೋಚದಾದ ದಂಪತಿ ಏಸುವಿನ ಮೊರೆಹೋಗಿದ್ದಾಗಿ ತಿಳಿಸಿದರು.
ನಂದಗಡ ಗ್ರಾಮದ ಹೊರವಲಯದ ಬೆಟ್ಟದ ಮೇಲಿರುವ ಏಸು ಕ್ರಿಸ್ತನ ಶಿಲುಬೆಯ ಮುಂದೆ ಪ್ರಾರ್ಥಿಸಿದರೆ ಮಗ ಬದುಕುತ್ತಾನೆ ಎಂದು ಮಿತ್ರರು ಹೇಳಿದ್ದರಿಂದ, ಆ ಮಾತು ನಂಬಿ ದಂಪತಿ ಇಲ್ಲಿಗೆ ಬಂದರು. ಶಿಲುಬೆ ಮುಂದೆ ಮಗನನ್ನು ಮಲಗಿಸಿ ದೂರದಲ್ಲಿ ಕುಳಿತು ಪ್ರಾರ್ಥಿಸಿದರು. ಬಾಲಕನ ಸ್ಥಿತಿಗೆ ಮಮ್ಮಲ ಮರುಗಿದ ಹಲವು ಗ್ರಾಮಸ್ಥರು ಕೂಡ ಏಸುವಿನ ಬಳಿ ಪ್ರಾರ್ಥನೆ ಸಲ್ಲಿಸಿದರು.
ಶಿಲುಬೆಯ ಇತಿಹಾಸವೇನು?
ನಂದಗಡ ಬೆಟ್ಟದಲ್ಲಿರುವ ಶಿಲುಬೆ ಐತಿಹಾಸಿಕ ಮಹತ್ವ ಪಡೆದಿದೆ. 1920ರಲ್ಲಿ ಪ್ಲೇಗ್ ಬಂದಾಗ ಪಾದ್ರಿಯೊಬ್ಬರು ಜನರನ್ನು ಇದೇ ಶಿಲುಬೆ ಇರುವ ಬೆಟ್ಟದ ಮೇಲೆ ಕರೆತಂದು ಸಾಮೂಹಿಕ ಪ್ರಾರ್ಥನೆ ನಡೆಸಿದ್ದರು. ಆ ಪ್ರಾರ್ಥನೆ ಫಲಿಸಿತು ಎಂಬ ಮಾತು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದು ಬಂದಿದೆ. ಹೀಗಾಗಿ, ಪ್ರತಿ ವರ್ಷ ಹಲವರು ತಮ್ಮ ಹರಕೆಗೆ ಇಲ್ಲಿಗೆ ಬರುವುದು ರೂಢಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.