ADVERTISEMENT

ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೈತ ಸಾವು

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 12:41 IST
Last Updated 24 ಜೂನ್ 2018, 12:41 IST
ಶಂಕರ ಮಾಟೊಳ್ಳಿ
ಶಂಕರ ಮಾಟೊಳ್ಳಿ   

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆಗೆ ಜಿಲ್ಲಾಡಳಿತದಿಂದ ದಾಖಲಿಸಲಾಗಿದ್ದ ಖಾನಾಪುರ ತಾಲ್ಲೂಕಿನ ಲಿಂಗನಮಠ ಗ್ರಾಮದ ರೈತ ಶಂಕರ ಮಾಟೊಳ್ಳಿ (85) ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟರು.

ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ನೇತೃತ್ವದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಿದ್ದಕ್ಕೆ ಲಾರಿ ಬಾಡಿಗೆ ₹ 90ಸಾವಿರ ಹಾಗೂ ಶಿವಸಾಗರ ಸಕ್ಕರೆ ಕಾರ್ಖಾನೆಗೆ ಪೂರೈಸಿದ್ದ ಕಬ್ಬಿನ ಬಿಲ್ ಬಾಕಿ ₹ 40ಸಾವಿರ ಬಂದಿಲ್ಲ. ಇದರಿಂದಾಗಿ ಜೀವನ ನಿರ್ವಹಣೆಗಾಗಿ ಲಾರಿ ಮಾರಿಕೊಂಡಿದ್ದೇವೆ. ತಂದೆ ಅನಾರೋಗ್ಯಪೀಡಿತರಾಗಿದ್ದಾರೆ. ಇದರಿಂದಾಗಿ ಬಹಳ ನೊಂದಿದ್ದೇವೆ. ಹೀಗಾಗಿ, ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಪ್ರಧಾನಿ, ಮುಖ್ಯಮಂತ್ರಿ ಹಾಗೂ ಅಧಿಕಾರಿಗಳಿಗೆ ಈ ಕುಟುಂಬದವರು ಪತ್ರ ಬರೆದಿದ್ದರು.

ರೈತರೂ ಆಗಿರುವ ಬಾಳಪ್ಪ ಪತ್ರ ಬರೆದಿದ್ದ ಸುದ್ದಿ ಮಾಧ್ಯಮದಲ್ಲಿ ಜೂನ್‌ 20ರಂದು ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ, ಆ ಕುಟುಂಬಕ್ಕೆ ನೆರವಾಗಿತ್ತು. ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಹಾಗೂ ಅಧಿಕಾರಿಗಳು ಆ ಕುಟುಂಬವನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದರು. ಪಾರ್ಶ್ವವಾಯುಪೀಡಿತರಾಗಿ ಹಾಸಿಗೆ ಹಿಡಿದಿದ್ದ ಶಂಕರ ಅವರನ್ನು ಜಿಲ್ಲಾಧಿಕಾರಿ ಎಸ್‌. ಜಿಯಾವುಲ್ಲಾ ಸೂಚನೆ ಮೇರೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾಗಿದ್ದ ₹ 1.30 ಲಕ್ಷ ಬಾಕಿಯನ್ನು ಗುರುವಾರವಷ್ಟೇ ಕೊಡಿಸಲಾಗಿತ್ತು.

ADVERTISEMENT

‘ಸಕ್ಕರೆ ಕಾರ್ಖಾನೆಗಳಿಂದ ಸಕಾಲಕ್ಕೆ ಬಾಕಿ ಬಂದಿದ್ದರೆ ನಮಗೆ ಈ ಗತಿ ಬರುತ್ತಿರಲಿಲ್ಲ. ಜಿಲ್ಲಾಡಳಿತ ಈಚೆಗಷ್ಟೇ ಬಾಕಿ ಕೊಡಿಸಿತ್ತು. ಈಗ ತಂದೆ ಕಳೆದುಕೊಂಡಿದ್ದೇನೆ. ಈ ನಡುವೆ ತಾಯಿಯೂ ಆನಾರೋಗ್ಯಪೀಡಿತರಾಗಿದ್ದಾರೆ. ಮುಂದಿನ ಜೀವನದ ಬಗ್ಗೆ ದಿಕ್ಕೇ ತೋಚದಂತಾಗಿದೆ’ ಎಂದು ಬಾಳಪ್ಪ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.