ADVERTISEMENT

ಬೆಲೆ ಕುಸಿತ: 3 ಎಕರೆ ಚೆಂಡು ಹೂ ಬೆಳೆ ನಾಶಪಡಿಸಿದ ರೈತ

​ಪ್ರಜಾವಾಣಿ ವಾರ್ತೆ
Published 22 ಜುಲೈ 2018, 15:26 IST
Last Updated 22 ಜುಲೈ 2018, 15:26 IST
   

ಬೆಳಗಾವಿ: ಚೆಂಡು ಹೂವಿನ ಬೆಲೆ ದಿಢೀರ್‌ ಕುಸಿದಿದ್ದರಿಂದ ಆಕ್ರೋಶಗೊಂಡ, ರಾಯಬಾಗ ತಾಲ್ಲೂಕು ಹಾರೊಗೇರಿಯ ರೈತ ಹನುಮಂತ ಬನಾಜ ಅವರು ತಮ್ಮ 3 ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಚೆಂಡು ಹೂವಿನ ಬೆಳೆಯನ್ನು ರೋಟವೇಟರ್‌ನಿಂದ ಭಾನುವಾರ ನಾಶಪಡಿಸಿದರು.

‘ಒಂದು ಕೆ.ಜಿಗೆ ₹ 70ರಿಂದ ₹ 80 ಬೆಲೆ ಇತ್ತು. ಇದೀಗ, ಸಂಪೂರ್ಣ ಕುಸಿದಿದೆ. ಕೆ.ಜಿ.ಯನ್ನು ₹ 5ಕ್ಕೆ ಕೇಳುವವರೂ ಇಲ್ಲ. ಆಗಿರುವ ಖರ್ಚು, ಕೂಲಿ ಕೂಡ ಸಿಗುತ್ತಿಲ್ಲ. ಹೀಗಾಗಿ, ಮನನೊಂದು ಬೆಳೆಯನ್ನೆಲ್ಲಾ ನಾಶಪಡಿಸಬೇಕಾಯಿತು. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಬೆಳೆಯಲು ₹ 1.50 ಲಕ್ಷ ಖರ್ಚಾಗಿತ್ತು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೋದ ವರ್ಷ 2 ಎಕರೆಯಲ್ಲಿ ಚೆಂಡು ಹೂ ಹಾಕಿದ್ದೆ. ಆಗ, ಕೆ.ಜಿ.ಗೆ ₹ 60ರಿಂದ 70 ಸಿಕ್ಕಿತ್ತು. ಈ ವರ್ಷವೂ ಆರಂಭದಲ್ಲಿ ಒಳ್ಳೆಯ ಬೆಲೆ ಇತ್ತು. ಈ ಬೆಲೆ ಮುಂದುವರಿಯುತ್ತಿಲ್ಲ. ಉತ್ತಮ ಬೆಲೆ ಸಿಕ್ಕಿದ್ದರೆ ₹ 8 ಲಕ್ಷದಿಂದ ₹ 9 ಲಕ್ಷ ಗಳಿಕೆಯಾಗುತ್ತಿತ್ತು’ ಎಂದು ಮಾಹಿತಿ ನೀಡಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರೈತರ ಸಂಕಷ್ಟಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ಕಬ್ಬಿಗೂ ಒಳ್ಳೆಯ ಬೆಲೆ ಇಲ್ಲ. ರೇಷ್ಮೆ ಬೆಳೆಗಾರರೂ ಕಂಗಾಲಾಗಿದ್ದಾರೆ. ಇದರಿಂದಾಗಿ ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ’ ಎಂದು ದೂರಿದರು.

‘₹ 8 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದೇನೆ. ಬಡ್ಡಿ ಕಟ್ಟುತ್ತಿದ್ದೇನೆ. ಬೇರೇನಾದರೂ ಬೆಳೆ ಮಾಡಬೇಕು ಎಂದು ಚೆಂಡುಹೂವಿನ ಗಿಡಗಳನ್ನು ನಾಶಪಡಿಸಿದ್ದೇನೆ. ಮುಂದೆಯೂ ಹೀಗೆಯೇ ಬೆಲೆ ಕುಸಿಯುತ್ತಾ ಹೋದರೆ, ರೈತರು ಬದುಕುವುದೇ ಕಷ್ಟವಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.