ಬೆಳಗಾವಿ: ‘ಹಿಂದಿನ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದೇ ದೊಡ್ಡ ಭಾರವಾಗಿದೆ. ಆ ಯೋಜನೆಯನ್ನು ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಅದಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ, ಹೊಸದಾಗಿ ಸಾಲ ಮನ್ನಾ ಮಾಡಲು ಆರ್ಥಿಕ ಪರಿಸ್ಥಿತಿ ಸರಿ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಹಿಂದಿನ ಸರ್ಕಾರ ಜಾರಿಗೊಳಿಸಿರುವ ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ತರಲು ಬೇಕಾದ ಪ್ರಯತ್ನ ಮಾಡುತ್ತೇನೆ. ವಿವಿಧ ಕಾರ್ಯಕ್ರಮಗಳ ಹಣವನ್ನು ನೆರೆ ಬಾಧಿತ ಪ್ರದೇಶಗಳಿಗಾಗಿ ಕೊಡುತ್ತಿದ್ದೇವೆ. ಸಂತ್ರಸ್ತರಿಗೆ ದೇಶದಲ್ಲಿಯೇ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಪರಿಹಾರ ನೀಡುತ್ತಿದ್ದೇವೆ’ ಎಂದರು.
‘ಮುಂಬರುವ ಉಪ ಚುನಾವಣೆ ನಮಗೆ ಮಹತ್ತರವಾದುದಾಗಿದೆ. ಹೀಗಾಗಿ, 15 ವಿಧಾನಸಭಾ ಕ್ಷೇತ್ರಗಳಿಗೂ ಒಬ್ಬೊಬ್ಬರು ಸಚಿವರನ್ನು ಉಸ್ತುವಾರಿಗಳನ್ನಾಗಿ ಹಾಕಿದ್ದೇನೆ. ಎಲ್ಲ ಸೀಟುಗಳನ್ನೂ ಗೆಲ್ಲುತ್ತೇವೆ ಎನ್ನುವ ಸಂಪೂರ್ಣ ವಿಶ್ವಾಸವಿದೆ’ ಎಂದು ತಿಳಿಸಿದರು.
‘ಅನರ್ಹ ಶಾಸಕರ ವಿಷಯದಲ್ಲಿ ಅಪಪ್ರಚಾರಕ್ಕೆ ಕಿವಿಕೊಡುವ ಅಗತ್ಯವಿಲ್ಲ. ಅ.22ರಂದು ಸುಪ್ರೀಂ ಕೋರ್ಟ್ ನೀಡುವ ತೀರ್ಪು ಆಧರಿಸಿ ನಮ್ಮ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸುತ್ತೇವೆ. ತಿಂಗಳಾಂತ್ಯದಿಂದ ನಮ್ಮ ಚುನಾವಣಾ ಪ್ರಚಾರ ಶುರು ಮಾಡುತ್ತೇವೆ’ ಎಂದು ತಿಳಿಸಿದರು.
‘ನೆರೆಯಿಂದ ಬಾಧಿತವಾಗಿರುವಲ್ಲಿ, ಸ್ಥಳಾಂತರಕ್ಕೆ ಸಿದ್ಧವಿರುವ ಗ್ರಾಮಗಳ ಜನರನ್ನು ಎತ್ತರದ ಸ್ಥಳಗಳಿಗೆ ಸ್ಥಳಾಂತರಿಸಿ ಮನೆಗಳನ್ನು ಕಟ್ಟಿ ಕೊಡಲು ಸಿದ್ಧವಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
‘ನೀರಾವರಿ ನಮ್ಮ ಮೊದಲ ಆದ್ಯತೆಯಾಗಿದೆ. ಮಹದಾಯಿ ಸೇರಿದಂತೆ ಎಲ್ಲ ವಿವಾದವನ್ನೂ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಚುನಾವಣೆ ಮುಗಿದ ನಂತರ ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.