ADVERTISEMENT

ಕೊತ್ತಂಬರಿ ಸೊಪ್ಪು ಬೆಳೆದು ₹2.5 ಲಕ್ಷ ಗಳಿಸಿದ ರೈತ

ಪ್ರಜಾವಾಣಿ ವಿಶೇಷ
Published 28 ಸೆಪ್ಟೆಂಬರ್ 2024, 23:28 IST
Last Updated 28 ಸೆಪ್ಟೆಂಬರ್ 2024, 23:28 IST
ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ರೈತ ಅಪ್ಪಾಸಾಬ ರೇಂದಾಳೆ ಅವರ ಹೊಲದಲ್ಲಿ ಬೆಳೆದಿರುವ ಕೊತ್ತಂಬರಿ ಸೊಪ್ಪು
ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ರೈತ ಅಪ್ಪಾಸಾಬ ರೇಂದಾಳೆ ಅವರ ಹೊಲದಲ್ಲಿ ಬೆಳೆದಿರುವ ಕೊತ್ತಂಬರಿ ಸೊಪ್ಪು   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕೇರೂರ ಗ್ರಾಮದ ರೈತ ಅಪ್ಪಾಸಾಬ ರೇಂದಾಳೆ ಅವರು, ಒಂದು ಎಕರೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು ₹2.5 ಲಕ್ಷ ಆದಾಯ ಗಳಿಸಿದ್ದಾರೆ.

ಅಪ್ಪಾಸಾಬ ಅವರಿಗೆ 8 ಎಕರೆ ಜಮೀನಿದೆ. 7 ಎಕರೆಯಲ್ಲಿ ಕಬ್ಬು ಬೆಳೆದಿದ್ದು, 1 ಎಕರೆಯಲ್ಲಿ ಕೊತ್ತಂಬರಿ ಬೀಜ ಬಿತ್ತಿದ್ದರು. ಹದ ಮಳೆ ಸುರಿದಿದ್ದರಿಂದ ಉತ್ತಮ ಇಳುವರಿ ಬಂದಿದೆ. ಕೊತ್ತಂಬರಿ ಸೊಪ್ಪಿನ ದರ ಏರಿಕೆಯಿಂದಾಗಿ ಕೈತುಂಬ ಹಣವೂ ಸಿಕ್ಕಿದೆ. 

ಕೆ.ಜಿಗೆ ₹370ರ ದರದಲ್ಲಿ ಅಶೋಕ ತಳಿಯ 60 ಕೆ.ಜಿ ಕೊತ್ತಂಬರಿ ಬೀಜಗಳನ್ನು ಖರೀದಿಸಿ ಬಿತ್ತಿದ್ದರು. ಒಮ್ಮೆಯಷ್ಟೇ ರಸಗೊಬ್ಬರ ಹಾಕಿ ಎರಡು ಬಾರಿ ರಾಸಾಯನಿಕ ಸಿಂಪಡಿಸಿದ್ದರು. ಆಗಾಗ್ಗೆ ನೀರುಣಿಸಿ, ಕಳೆ ತೆಗೆದು ಬೆಳೆ ಜತನ ಮಾಡಿದ್ದರು. ಅಕ್ಟೋಬರ್‌ ಮಳೆ ಮತ್ತು ಹವಾಗುಣಕ್ಕೆ ಕೊತ್ತಂಬರಿ ಸೊಪ್ಪು ಹುಲುಸಾಗಿ ಬೆಳೆದಿದೆ. 

ADVERTISEMENT

ಹೊಲದಲ್ಲಿ ಕೊತ್ತಂಬರಿ ಸೊಪ್ಪು ನೋಡಿದ ವರ್ತಕರು ₹2.5 ಲಕ್ಷಕ್ಕೆ ಎಲ್ಲವನ್ನೂ ಗುತ್ತಿಗೆ ಪಡೆದಿದ್ದರು. ಇದರಿಂದ ಅಪ್ಪಾಸಾಬ ಅವರಿಗೆ ಕೂಲಿಯಾಳು, ಸಾಗಣೆ ಮತ್ತು ಮಾರುಕಟ್ಟೆ ವೆಚ್ಚ ಉಳಿದಿದೆ. ಒಂದು ತಿಂಗಳಿನಲ್ಲಿ ಕಟಾವಿಗೆ ಬರುವ ಈ ಬೆಳೆಗೆ ಅವರು ₹45 ಸಾವಿರ ವೆಚ್ಚ ಮಾಡಿದ್ದಾರೆ.

‘ಕೊತ್ತಂಬರಿ ಸೊಪ್ಪು ಖರೀದಿಸಿ ಎಂಟು ಕೂಲಿಯಾಳುಗಳ ನೆರವಿನಿಂದ ಕಟಾವು ಮಾಡಿ ಮುಂಬೈಗೆ ಸಾಗಿಸಿದ್ದೇನೆ. ಬೆಳಗಾವಿ, ಚಿಕ್ಕೋಡಿ ಮಾರುಕಟ್ಟೆಯಲ್ಲಿ ಒಂದು ಹಿಡಿ ಕೊತ್ತಂಬರಿ ಸೊಪ್ಪಿನ ದರ ₹20 ಇದ್ದರೆ, ಮುಂಬೈನಲ್ಲಿ ₹30ಕ್ಕೂ ಹೆಚ್ಚಿದೆ. ಉತ್ತಮ ಮಾರಾಟದಿಂದ ಹೆಚ್ಚಿನ ಲಾಭದ ನಿರೀಕ್ಷಯಿದೆ’ ಎಂದು ವ್ಯಾಪಾರಿ ರಮೇಶ ಮಲ್ಲಾಪುರ ತಿಳಿಸಿದರು.

ಅಪ್ಪಾಸಾಬ ರೇಂದಾಳೆ
ರಮೇಶ ಮಲ್ಲಾಪುರ
ಹೊಲದಲ್ಲಿ ನಿರಂತರವಾಗಿ ಒಂದೇ ಬೆಳೆ ಬೆಳೆಯುವುದರಿಂದ ಇಳುವರಿ ಕುಸಿಯುತ್ತದೆ. 2 ವರ್ಷ ಕಬ್ಬು ಬೆಳೆದು ಕೊತ್ತಂಬರಿ ಬಿತ್ತಿದ್ದರಿಂದ ಹುಲುಸಾಗಿ ಬೆಳೆದಿದೆ
–ಅಪ್ಪಾಸಾಬ ರೇಂದಾಳೆ ರೈತ ಕೇರೂರ ಚಿಕ್ಕೋಡಿ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.