ADVERTISEMENT

ಹುಕ್ಕೇರಿ: 40 ಗುಂಟೆಯಲ್ಲಿ ಟೊಮೆಟೊ ಬೆಳೆದ ರೈತ ಲಕ್ಷಾಧೀಶ

40 ಗುಂಟೆಯಲ್ಲಿ ಭರ್ಜರಿ ಫಸಲು, ಟನ್‌ಗೆ ₹80 ಸಾವಿರ ದರ

ಎನ್.ಪಿ.ಕೊಣ್ಣೂರ
Published 23 ಜುಲೈ 2024, 3:59 IST
Last Updated 23 ಜುಲೈ 2024, 3:59 IST
ಹುಕ್ಕೇರಿ ತಾಲ್ಲೂಕಿನ ಬೆಣಿವಾಡ ಗ್ರಾಮದಲ್ಲಿ ಟೊಮೆಟೊ ಬೆಳೆಯ ಜತೆ ಕೃಷಿಕ ರಾಜಕುಮಾರ ಪಾಟೀಲ (ಬಂದಾಯಿ)
ಹುಕ್ಕೇರಿ ತಾಲ್ಲೂಕಿನ ಬೆಣಿವಾಡ ಗ್ರಾಮದಲ್ಲಿ ಟೊಮೆಟೊ ಬೆಳೆಯ ಜತೆ ಕೃಷಿಕ ರಾಜಕುಮಾರ ಪಾಟೀಲ (ಬಂದಾಯಿ)   

ಹುಕ್ಕೇರಿ: ತಾಲ್ಲೂಕಿನ ಬೆಣಿವಾಡದ ರೈತ ರಾಜಕುಮಾರ ಬಸವಂತಪ್ಪ ಪಾಟೀಲ (ಬಂದಾಯಿ) ಟೊಮೆಟೊ ಬೆಳೆದು ಲಾಭ ಗಳಿಸಿದ್ದಾರೆ. ಸದ್ಯಕ್ಕೆ ಟೊಮೆಟೊ ದರ ಕೆಜಿಗೆ ₹ 80 ಇದೆ.

ರಾಜಕುಮಾರ ಅವರು ಒಂದು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದು, ಇದರಲ್ಲಿ 20 ಗುಂಟೆಯ ಎರಡು ಭಾಗ ಮಾಡಿದ್ದಾರೆ. ಎರಡೂ ಭಾಗಗಳು ಸೇರಿ ಕನಿಷ್ಠ 25 ಟನ್‌ ಫಲ ಬರಲಿದೆ. ಇದೇ ದರ ಒಂದು ತಿಂಗಳು ಮುಂದುವರಿದರೆ ₹20 ಲಕ್ಷ ಆದಾಯ ಬರಲಿದೆ. ₹2 ಲಕ್ಷ ವೆಚ್ಚ ಮಾಡಿದ್ದು, ₹18 ಲಕ್ಷ ಲಾಭ ಗಳಿಸುವ ನಿರೀಕ್ಷೆಯಿದೆ.

20 ಗುಂಟೆಯ ಒಂದು ಭಾಗದಲ್ಲಿ ಮೊದಲ ಹಂತದಲ್ಲಿ 5 ಟನ್‌ ಟೊಮೆಟೊ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ. ಪ್ರತಿ ಟನ್‌ಗೆ ₹80 ಸಾವಿರ ದರದಲ್ಲಿ ರೈತ ರಾಜಕುಮಾರ ಅವರಿಗೆ ₹4 ಲಕ್ಷ ಆದಾಯ ಬಂದಿದೆ.

ADVERTISEMENT

‘ನನಗೆ 12 ಎಕರೆ ಜಮೀನಿದೆ. 40 ಗುಂಟೆ (1 ಎಕರೆ) ಜಮೀನಿನಲ್ಲಿ ಎರಡು ಭಾಗ ಮಾಡಿ ಟೊಮೆಟೊ ಬೆಳೆದಿರುವೆ. ಪ್ರತಿ ಭಾಗದಲ್ಲೂ ಎರಡು ಹಂತಗಳಲ್ಲಿ ಕೊಯ್ಲು ಬರಲಿದೆ. ಬೆಳಗಾವಿಯ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಕೆಜಿಗೆ ₹100ರ ದರದಲ್ಲಿ ಮಾರಾಟವಾಗುತ್ತಿದೆ. ವರ್ತಕರು ನಮ್ಮ ಜಮೀನಿಗೆ ಬಂದು ₹80ಕ್ಕೆ ಖರೀದಿಸಿ ಅವರೇ ಸಾಗಣೆ ಮಾಡುತ್ತಾರೆ. ನಮಗೆ ನಿರ್ವಹಣೆ ಹಾಗೂ ಕೂಲಿಯ ವೆಚ್ಚ ಮಾತ್ರ ಬರುತ್ತದೆ. ಈಗಿನಷ್ಟು ದರ ಹಿಂದೆಂದೂ ಸಿಕ್ಕಿರಲಿಲ್ಲ’ ಎಂದು ರಾಜಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವ ಸಮಯದಲ್ಲಿ ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದು ಗೊತ್ತಿರಬೇಕು. ವಾಣಿಜ್ಯ ಚಟುವಟಿಕೆ ಅನುಸಾರ ಲಾಭದಾಯಕ ಬೆಳೆ ಬೆಳೆಯಬಹುದು. ಟೊಮೆಟೊ, ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ಒಂದಾದ ಮೇಲೊಂದು ಬೆಳೆಯುವುದು ರೂಢಿ. ಈ ಮೂರು ಬೆಳೆಗಳಿಂದ ಪ್ರತಿ ವರ್ಷ ₹10 ಲಕ್ಷ ಲಾಭವಾಗುತ್ತಿದೆ’ ಎಂದರು,

ಹಳ್ಳದ ನೀರು, ಕೊಳವೆಬಾವಿ, ಬಾವಿ ಅವರ ಜಮೀನಿನಲ್ಲಿವೆ. ಸಾವಯವ ಗೊಬ್ಬರ ಬಳಸುತ್ತಾರೆ. ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಶೇಖರ ಪಾಟೀಲ ಮತ್ತು ತಾತ್ಯಾಸಾಹೇಬ ನಾಂದಣಿ ಅವರು ಮಾರ್ಗದರ್ಶನ ನೀಡುತ್ತಾರೆ. ಅವರ ಶಿಫಾರಸಿನ ಮೇರೆಗೆ ‘ಆರ್ಕಾ ಟಾನಿಕ್’ ಜತೆ ಒಂದು ಲಿಂಬು ಹಣ್ಣಿನ ರಸ ಬೆರೆಸಿ ಸಿಂಪಡಿಸಿ, ಬೆಳೆ ರಕ್ಷಿಸಿದ್ದಾರೆ. ರಾಜಕುಮಾರ ಅವರ ದೂರವಾಣಿ ಸಂಖ್ಯೆ: 96201 79191.

ರೈತರು ವಾಣಿಜ್ಯ ಚಟುವಟಿಕೆ ಮೇಲೆ ಗಮನ ಇಡಬೇಕು. ಕೊರತೆ ಇರುವ ಬೆಳೆ ಬೆಳೆದರೆ ಕೃಷಿಯಲ್ಲಿ ಹೆಚ್ಚು ಆದಾಯ ಪಡೆಯಲು ಸಾಧ್ಯ
ರಾಜುಕುಮಾರ ಪಾಟೀಲ ರೈತ ಬೆಣಿವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.