ಬೆಳಗಾವಿ: ಕೊರೊನಾ ಸೋಂಕಿನ ಭೀತಿಯಿಂದಾಗಿ ರೈತರ ಮತ್ತು ಕೃಷಿ ಹಾಗೂ ವಿವಿಧ ಕ್ಷೇತ್ರಗಳ ಕಾರ್ಮಿಕರ ಬದುಕು ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಬೆಳೆ ಸಾಲ ಮರುಪಾವತಿ ಸಮಸ್ಯೆಯನ್ನು ರಾಜ್ಯ ಸರ್ಕಾರ ತಕ್ಷಣ ಬಗೆಹರಿಸಬೇಕು ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದ್ದಾರೆ.
ರೈತರ ಬೆಳೆ ಸಾಲ ಮರುಪಾವತಿ ಅವಧಿಯು ಪ್ರತಿ ವರ್ಷ ಏಪ್ರಿಲ್‍ದಿಂದ ಜೂನ್ ತಿಂಗಳಲ್ಲಿ ಅಂತ್ಯವಾಗುತ್ತದೆ. ಈ ಅವಧಿಯಲ್ಲಿ ರೈತರು ಸಾಲ ಮರುಪಾವತಿ ಮಾಡಿದರೆ, ಶೇ 3 ಬಡ್ಡಿ ದರ ಆಕರಿಸಲಾಗುತ್ತದೆ. ಸರ್ಕಾರದಿಂದ ಶೇ 4 ಬಡ್ಡಿ ರಿಯಾಯತಿ ದೊರೆಯುತ್ತದೆ. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡದಿದ್ದರೇ, ಬ್ಯಾಂಕುಗಳು ಶೇ 14 ಬಡ್ಡಿ ದರ ವಿಧಿಸುತ್ತವೆ. ಕೊರೊನಾದಿಂದ ಮಾರುಕಟ್ಟೆ ವ್ಯವಸ್ಥೆ ಇಲ್ಲದರಿಂದ ಕೃಷಿ ಉತ್ಪನ್ನಗಳು ಮಾರಾಟವಾಗದೇ, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸಾಲ ಮರುಪಾವತಿಯ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
‘ನೆರೆ ಮತ್ತು ಬರಕ್ಕಿಂತಲೂ ಇಂದು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಎಪಿಎಂಸಿ ಮಾರುಕಟ್ಟೆಗಳು ಆರಂಭಿಸಿದ್ದರೂ ಅದರಿಂದ ರೈತರಿಗೆ ನಿರೀಕ್ಷಿತ ಸಹಾಯ ಆಗುತ್ತಿಲ್ಲ. ರೈತರು ಈಗಿನ ಸಂಕಷ್ಟದ ಸಮಯದಲ್ಲಿ ಹೊಲದಲ್ಲಿಯ ಬೆಳೆಗಳನ್ನು ತೆಗೆದು ಮುಂಗಾರು ಹಂಗಾಮಿಗೆ ಭೂಮಿಯನ್ನು ಹದಗೊಳಿಸಬೇಕಾಗಿದೆ. ಭೂಮಿಯನ್ನು ಹದಗೊಳಿಸುವುದೇ ದೊಡ್ಡ ಸಮಸ್ಯೆಯಾಗಿರುವುದರಿಂದ ಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದೇ ಇಲ್ಲ’ ಎಂದು ತಿಳಿಸಿದ್ದಾರೆ.
‘ರೈತರ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಆರ್ಥಿಕ ಪರಿಸ್ಥಿತಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಇಲ್ಲ ಎಂಬ ಅರಿವು ನಮಗಿದೆ. ಹಾಗಾಗಿ ಈ ವರ್ಷ ಮಾಡಲಾಗದ ಅಭಿವೃದ್ಧಿ ಕಾಮಗಾರಿ ಹಾಗೂ ಇತರ ಚಟುವಟಿಕೆಗಳ ಹಣವನ್ನು ಬಳಸಿಕೊಂಡು ರೈತರ ಸಹಕಾರಿ ಸಂಸ್ಥೆಗಳ ಮತ್ತು ರಾಷ್ಟೀಕೃತ ಬ್ಯಾಂಕುಗಳಲ್ಲಿಯ ಬೆಳೆ ಸಾಲದ ಬಡ್ಡಿಯನ್ನು ಮನ್ನಾ ಮಾಡಬೇಕು. ಬೆಳೆ ಸಾಲ ಸೇರಿದಂತೆ ಅವಧಿ ಮುಗಿದ ಎಲ್ಲ ಕೃಷಿ ಸಂಬಂಧಿತ ಸಾಲಗಳನ್ನು ಕನಿಷ್ಠ ಒಂದು ವರ್ಷದವರೆಗೆ ಸರಕಾರವೇ ನವೀಕರಿಸಬೇಕು’ ಎಂದು ಅವರು ಪ್ರಕಟಣೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.