ಬೆಳಗಾವಿ: ಕೇಂದ್ರ ಸರ್ಕಾರವು ಘೋಷಿಸಿರುವ ‘ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ’ (ಪಿಎಂ–ಕಿಸಾನ್) ಯೋಜನೆಯಡಿ ಜಿಲ್ಲೆಯ 3,81,223 ರೈತರು ತಲಾ ₹ 2ಸಾವಿರದಂತೆ 3 ಕಂತುಗಳಲ್ಲಿ ಸಹಾಯಧನ ಪಡೆದಿದ್ದಾರೆ.
ವರ್ಷದ ಅವಧಿಯಲ್ಲಿ 3 ಕಂತುಗಳಲ್ಲಿ ಹಣ ನೀಡಲಾಗಿದೆ. ಮೊದಲ ಕಂತನ್ನು 4,95,295, 2ನೇ ಕಂತನ್ನು 4,89,264 ಹಾಗೂ 3ನೇ ಕಂತನ್ನು 3,81,223 ಮಂದಿ ಗಳಿಸಿದ್ದಾರೆ. ಅವರವರ ಖಾತೆಗಳಿಗೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಣವನ್ನು ಬಿಡುಗಡೆ ಮಾಡಲಾಗಿದೆ. ಕಂತುಗಳಲ್ಲಿ ದೊರೆತ ಈ ಹಣದಿಂದ ರೈತರಿಗೆ ಅನುಕೂಲವಾಗಿದೆ. ಇವರಲ್ಲಿ ಬಹುತೇಕರಿಗೆ 3ನೇ ಕಂತು ಅಂದರೆ ಒಟ್ಟು ₹ 6ಸಾವಿರ ಸಂದಾಯವಾಗಿದೆ. ಜಿಲ್ಲೆಗೆ ₹ 228.73 ಕೋಟಿ ದೊರೆತಿದೆ.
ವರ್ಷಕ್ಕೆ ಪ್ರತಿ ರೈತರಿಗೆ ತಲಾ ₹6 ಸಾವಿರ (3 ಕಂತುಗಳಲ್ಲಿ) ಸಹಾಯಧನ ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಇದರಂತೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. 2018ರ ಫೆ. 19ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿತ್ತು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗಲು ಹಾಗೂ ಅವರ ಆದಾಯ ವೃದ್ಧಿಸಲು ಸರ್ಕಾರ ಯೋಜನೆ ಜಾರಿಗೊಳಿಸಿದೆ. ಅರ್ಹರೆಲ್ಲರಿಗೂ ಸೌಲಭ್ಯ ದೊರೆಯಲಿದೆ ಎನ್ನುತ್ತಾರೆ ಅಧಿಕಾರಿಗಳು.
ಉಳಿದವರಿಗೂ ಬರುವ ನಿರೀಕ್ಷೆ:2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 5.47 ಲಕ್ಷ ರೈತ ಕುಟುಂಬಗಳಿವೆ. ಈ ಪೈಕಿ 5.20 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ, ಮೊದಲ ಕಂತಿನಲ್ಲಿ ಗರಿಷ್ಠ ಅಂದರೆ 4.95 ಲಕ್ಷ ಮಂದಿಗೆ ಸಹಾಯಧನ ಬಂದಿದೆ.
‘2 ಹಾಗೂ 3ನೇ ಕಂತಿನಲ್ಲಿ ಹಣ ಬಿಡುಗಡೆಯಾದ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗಿದೆ. ತಾಂತ್ರಿಕ ಕಾರಣದಿಂದ ಸಂಖ್ಯೆ ಕಡಿಮೆಯಾಗಿದೆ. ಆದರೆ, ಸ್ವಯಂಘೋಷಣೆ ಪ್ರಮಾಣಪತ್ರದೊಂದಿಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದ ಎಲ್ಲರಿಗೂ ಹಂತ ಹಂತವಾಗಿ ಸಹಾಯಧನ ದೊರೆಯಲಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ದಾಖಲೆಗಳು ಹೊಂದಾಣಿಕೆಯಾಗದೇ ಇರುವುದು, ಆಧಾರ್ ದೃಢೀಕರಣದಲ್ಲಿ ತೊಂದರೆ ಮೊದಲಾದ ತಾಂತ್ರಿಕ ಕಾರಣಗಳಿಂದ ಕೆಲವರಿಗೆ ಹಣ ಬಂದಿಲ್ಲದಿರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಅವರಿಗೆ ಮಾಹಿತಿ ನೀಡುತ್ತಿದ್ದಾರೆ.
ನೋಂದಣಿಗೆ ಅವಕಾಶ:ಯೋಜನೆಯು ಈ 2ನೇ ವರ್ಷವೂ ಮುಂದುವರಿಯಲಿದೆ ಎಂದು ಸರ್ಕಾರ ತಿಳಿಸಿದೆ. ರೈತರು ಈಗಲೂ ನೋಂದಣಿ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಫಲಾನುಭವಿಗಳಾಗಲು ಬಯಸುವ ರೈತರು ತಮ್ಮ ವ್ಯಾಪ್ತಿಯಲ್ಲಿರುವ ರೈತ ಸಂಪರ್ಕ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಅಥವಾ ಅಟಲ್‌ಜಿ ಜನಸ್ನೇಹಿ ಕೇಂದ್ರಗಳಲ್ಲಿ ಅಗತ್ಯ ದಾಖಲಾತಿಗಳ ಪ್ರತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ.
ಆನ್‌ಲೈನ್‌ನಲ್ಲಿ ಮಾಹಿತಿ ದಾಖಲಿಸಲು ‘ಫ್ರೂಟ್ಸ್’ (ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯುನಿಫೈಡ್ ಬೆನಿಫಿಶರಿ ಇನ್ಫರ್ಮೇಷನ್ ಸಿಸ್ಟಂ) ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ದಾಖಲಿಸಿದ ಬಳಿಕ ಅವರಿಗೆ ‘ಫ್ರೂಟ್ಸ್–ಪಿಎಂಕಿಸಾನ್’ ಎಂಬ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತದೆ.
ಜಿಲ್ಲೆಯಲ್ಲಿ 35 ರೈತ ಸಂಪರ್ಕ ಕೇಂದ್ರ, 475 ಬಾಪೂಜಿ ಸೇವಾ ಕೇಂದ್ರಗಳು ಹಾಗೂ 35 ಅಟಲ್‌ಜಿ ಜನಸ್ನೇಹಿ ಕೇಂದ್ರಗಳಿವೆ. ಇಲ್ಲಿ ರೈತರು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.