ಬೆಳಗಾವಿ: ‘ಬೆಳಗಾವಿ–ಕಿತ್ತೂರು–ಧಾರವಾಡ ನೂತನ ರೈಲು ಮಾರ್ಗಕ್ಕಾಗಿ ತಾಲ್ಲೂಕಿನ ಕೆ.ಕೆ. ಕೊಪ್ಪ–ದೇಸೂರುವರೆಗೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಗಿರುವುದು ಸರಿಯಲ್ಲ. ಸಮೀಪದಲ್ಲೇ ಲಭ್ಯವಿರುವ ಬಂಜರು ಭೂಮಿಯನ್ನು ಬಳಸಿಕೊಳ್ಳಬೇಕು’ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ರಾಣಿ ಚನ್ಮಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಬಳಿಕ ‘ಕಾಡಾ’ ಕಟ್ಟಡದಲ್ಲಿರುವ ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಅವರನ್ನು ಪೊಲೀಸರು ಗೇಟ್‌ನಲ್ಲೇ ತಡೆದರು. ಪ್ರತಿಭಟನಾಕಾರರು ಅಲ್ಲೇ ಕುಳಿತು ಬೇಡಿಕೆ ಮಂಡಿಸಿದರು.
‘ಮಾರ್ಗಕ್ಕಾಗಿ ಫಲವತ್ತಾದ ಕಪ್ಪು ಮಣ್ಣಿನ ಕೃಷಿ ಭೂಮಿ ಬಳಸಲು ಯೋಜಿಸಲಾಗಿದೆ. ಸಣ್ಣ ರೈತರ ಚಿಕ್ಕ ಹಿಡುವಳಿಯ ಮತ್ತು ಕಬ್ಬು ಬೆಳೆಯುವ ನೀರಾವರಿ ಜಮೀನು ಇವಾಗಿವೆ. ಇದನ್ನೆ ಅವಲಂಬಿಸಿ ಗರ್ಲಗುಂಜಿ, ದೇಸೂರು, ರಾಜಹಂಸಗಡ, ನಂದಿಹಳ್ಳಿ, ನಾಗೇನಹಟ್ಟಿ, ನಾಗಿರಹಾಳ, ಕೆ.ಕೆ. ಕೊಪ್ಪ, ಹಲಗಿಮರಡಿ ಮೊದಲಾದ ಗ್ರಾಮಗಳ ಜನರು ಜೀವನ ನಡೆಸುತ್ತಿದ್ದಾರೆ. ಜಮೀನು ನೀಡಲು ರೈತರ ವಿರೋಧವಿದೆ’ ಎಂದು ತಿಳಿಸಿದರು.
ಎಲ್ಲರಿಗೂ ಅನುಕೂಲ:
‘ನಿಯೋಜಿತ ಮಾರ್ಗವು ರೈತರ ಕೃಷಿ ಭೂಮಿಯನ್ನು ಇಬ್ಭಾಗ ಮಾಡುವುದರಿಂದ, ಕೃಷಿಗೆ ಅನಾನುಕೂಲ ಆಗುತ್ತದೆ. ಆ ಭಾಗದಲ್ಲಿರುವ ಬಂಜರು ಭೂಮಿಯ ಮೂಲಕ ಮಾರ್ಗ ನಿರ್ಮಿಸಿದರೆ, 4 ಕಿ.ಮೀ. ಕಡಿಮೆಯಾಗುತ್ತದೆ ಮತ್ತು ಮಾರ್ಗವನ್ನು ನೇರವಾಗಿಯೇ ರೂಪಿಸಬಹುದು. ಇದರೊಂದಿಗೆ ಕಾಮಗಾರಿ ವೆಚ್ಚವೂ ತಗ್ಗಲಿದೆ. ರೈತರಿಗೂ ಅನುಕೂಲ ಆಗುತ್ತದೆ. ಇದನ್ನು ಮರುಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.
ಮುಖಂಡ ಪ್ರಕಾಶ್ ನಾಯ್ಕ, ‘ರೈತರ ಸಮಾಧಿ ಮೇಲೆ ಮಾರ್ಗ ನಿರ್ಮಿಸುವುದು ಬೇಡ. ಮೂಲ ರೈಲು ಮಾರ್ಗದ ನಕ್ಷೆ ಬೇರೆ ಇತ್ತು. ದಿವಂಗತ ಸುರೇಶ ಅಂಗಡಿ ಅವರು ಕೇಂದ್ರ ಸಚಿವರಾದ ಬಳಿಕ ಮಾರ್ಗ ಬದಲಿಸಿದರು. ಇದರಲ್ಲಿ ಅಂಗಡಿ ಕುಟುಂಬದ ಒಂದಿಂಚು ಭೂಮಿಯೂ ಹೋಗುವುದಿಲ್ಲ. ಆದರೆ, ಸಾಮಾನ್ಯ ರೈತರು ಅರ್ಧ, 1 ಎಕರೆ ಫಲವತ್ತಾದ ಜಮೀನು ಕಳೆದುಕೊಳ್ಳುತ್ತಾರೆ’ ಎಂದು ತಿಳಿಸಿದರು.
ಅಧ್ಯಕ್ಷ ಚುನಪ್ಪ ಪೂಜೇರಿ ಮಾತನಾಡಿ, ‘ನಂದಿಹಳ್ಳಿ ಭಾಗದ ಫಲವತ್ತಾದ ಭೂಮಿಯಲ್ಲಿ ರೈಲು ಮಾರ್ಗವನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಬರಡು ಭೂಮಿ ಲಭ್ಯವಿದ್ದು, ಅಲ್ಲಿ ಬಳಸಿಕೊಳ್ಳಬೇಕು. ಕೆ.ಕೆ.ಕೊಪ್ಪ-ದೇಸೂರ ಮಾರ್ಗವನ್ನು ಬದಲಾಯಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಸಂಸದೆ, ‘ದಿ.ಸುರೇಶ ಅಂಗಡಿ ಅವರೂ ರೈತನ ಮಗನೆ. ಕೃಷಿಕರ ಬಗ್ಗೆ ನನಗೂ ಅಪಾರ ಕಾಳಜಿಯಿದೆ. ನಿಮ್ಮ ಬೇಡಿಕೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.
ರಾಘವೇಂದ್ರ ನಾಯ್ಕ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.