ಬೆಳಗಾವಿ: ತಮಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್ ಪಾವತಿಸಬೇಕು. ಬರದಿಂದ ತತ್ತರಿಸಿದ ರೈತರಿಗೆ ತ್ವರಿತವಾಗಿ ಬೆಳೆ ಹಾನಿ ಪರಿಹಾರ ವಿತರಿಸಬೇಕು. ರೈತರ ವಾಹನಗಳನ್ನು ಪೊಲೀಸರು ಅನಗತ್ಯವಾಗಿ ತಡೆಗಟ್ಟಿ ತೊಂದರೆ ನೀಡುವುದನ್ನು ನಿಲ್ಲಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ 7 ತಾಸು ತ್ರಿಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ರಾಯಬಾಗ ತಾಲ್ಲೂಕಿನ ಚಿಂಚಲಿ ಪಟ್ಟಣ, ಕುಡಚಿ, ಸುಟ್ಟಟ್ಟಿ ಹಾಗೂ ನಂದಿಕುರಳಿ ಗ್ರಾಮಗಳಲ್ಲಿ ಹಾಯ್ದುಹೋಗಿರುವ ಕಾಲುವೆಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯ ಭೂದಾಖಲೆಗಳ ಇಲಾಖೆಯಲ್ಲಿ ಅಧಿಕಾರಿಗಳು ಹಣ ಪಡೆದು, ನಕ್ಷೆಯನ್ನೇ ಬದಲಿಸುತ್ತಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾದ ಇಲಾಖೆ ಉಪನಿರ್ದೇಶಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಡಿ.ಸಿ, ‘ನಿಮ್ಮ ಬೇಡಿಕೆಗಳನ್ನು ಸಂಬಂಧಿತರ ಗಮನಕ್ಕೆ ತಂದು, ಈಡೇರಿಸಲು ಅಗತ್ಯ ಕ್ರಮ ವಹಿಸುತ್ತೇನೆ’ ಎಂದು ಭರವಸೆ ನೀಡಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಮುಖಂಡರಾದ ಭೀಮಶಿ ಗದಾಡಿ, ರಮೇಶ ಮಡಿವಾಳ, ಹನುಮಂತ ನಾಯಿಕ, ಮಹಮ್ಮದ್ ಜಮಾದಾರ, ಮಹಾದೇವ ಮಡಿವಾಳ, ಲಕ್ಕಪ್ಪ ಅರಟಾಳ, ರಮೇಶ ಕುಂಬಾರ, ಅಡಿವೆಪ್ಪ ಆಜೂರ, ಕಿರಣ ಮಿಸಾಳ, ನಿಂಗನಗೌಡ ಪಾಟೀಲ ಇತರರಿದ್ದರು.
‘ರಾಜ್ಯದ ವಿಧಾನಸಭೆ ಈಗ ಕಳ್ಳರ ಸಂತೆಯಾಗಿದೆ. ಬಿಜೆಪಿಯವರು ಕಾಂಗ್ರೆಸ್‌ನವರು ಕಳ್ಳರೆಂದು, ಕಾಂಗ್ರೆಸ್‌ನವರು ಬಿಜೆಪಿಯವರು ಕಳ್ಳರೆಂದು ಹೇಳುತ್ತಿದ್ದಾರೆ. ರೈತರ ಬಗ್ಗೆ ಕಳಕಳಿ ಹೊಂದಿರದ ನೀವಿಬ್ಬರೂ ವಿಧಾನಸೌಧದಿಂದ ಖಾಲಿ ಮಾಡಿ’ ಎಂದು ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತ ವಿರೋಧಿಯಾಗಿದೆ. ರಾಜ್ಯದ ರೈತರ ಸ್ಥಿತಿಯನ್ನು ಆ ಸರ್ಕಾರ ಅರ್ಥೈಸಿಕೊಂಡಿಲ್ಲ. ರೈತರನ್ನು ಮರೆತ ಮುಖ್ಯಮಂತ್ರಿಗಳು ಹಗರಣದಲ್ಲಿ ಸಿಲುಕಿದ್ದಾರೆ. ಕಳೆದ ವರ್ಷ ಬರದಿಂದ ತತ್ತರಿಸಿದ ರೈತರಿಗೆ ಇನ್ನೂ ಬೆಳೆವಿಮೆ ಹಣವೂ ಸಿಕ್ಕಿಲ್ಲ’ ಎಂದು ದೂರಿದರು.
‘ಕೇಂದ್ರ ಸರ್ಕಾರವು ಮಲ್ಟಿನ್ಯಾಷನಲ್ ಕಂಪನಿಗಳು, ಕಾರ್ಪೋರೇಟ್ ಕಂಪನಿಗಳಿಗೆ ಹೆಚ್ಚಿನ ಸಾಲ ಕೊಟ್ಟಿದೆ. ಅದು ಮನಸ್ಸು ಮಾಡಿದ್ದರೆ, ಇಡೀ ದೇಶದ ರೈತರ ಸಾಲಮನ್ನಾ ಮಾಡಬಹುದಿತ್ತು. ಆದರೆ, ಕೇಂದ್ರಕ್ಕೆ ಕೃಷಿಕರ ಬಗ್ಗೆ ಕಾಳಜಿ ಇಲ್ಲ’ ಎಂದರು.
‘ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಜಾರಿಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ 2014ರಿಂದ ಹೇಳುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಾದರೂ ಅದು ಜಾರಿಯಾಗಲಿ’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.