ಸವದತ್ತಿ (ಬೆಳಗಾವಿ ಜಿಲ್ಲೆ): ‘ರೈತರ ಅವಹೇಳನ ಮಾಡಿದ ಸಕ್ಕರೆ ಸಚಿವ ಶಿವಾನಂದ ಪಾಟೀಲರು ಈಗಲೇ ಆತ್ಮಹತ್ಯೆ ಮಾಡಿಕೊಂಡರೆ, ರೈತರೆಲ್ಲ ಭಿಕ್ಷಾಟನೆ ನಡೆಸಿ ₹5 ಕೋಟಿ ಪರಿಹಾರ ನೀಡುತ್ತೇವೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜಾರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ರೈತರ ಪ್ರತಿಭಟನೆಯ ನೇತೃತ್ವ ವಹಿಸಿದ ಅವರು, ‘ಬರ ಮತ್ತು ಪರಿಹಾರದ ನಿರೀಕ್ಷೆಯಲ್ಲಿ ರೈತರು ಇರುತ್ತಾರೆ ಎಂದು ಹೇಳಿ ವ್ಯಂಗ್ಯವಾಡಿರುವ ಶಿವಾನಂದ ಪಾಟೀಲ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು. ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು’ ಎಂದರು.
‘ಸಾಲ ಮರು ಪಾವತಿಗಾಗಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಕಿರುಕುಳ ನೀಡದಂತೆ ಕ್ರಮ ವಹಿಸಬೇಕು. ರೈತರ ಆತ್ಮಹತ್ಯೆ ತಡೆಯಲು ಸಾಲ ವಸೂಲಾತಿ ಸ್ಥಗಿತಗೊಳಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ವಹಿಸಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ನಡೆಸಿ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.
ತಾಲ್ಲೂಕನ್ನು ಸಂಪೂರ್ಣ ನೀರಾವರಿಯನ್ನಾಗಿಸಬೇಕು. ಬೆಳೆ ಮಿಮೆ ಸಮರ್ಪಕವಾಗಿ ನೀಡಬೇಕು. ಭೂ ದಾಖಲೆಗಳಿಗೆ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ವಸೂಲಾತಿ ನಡೆದಿದ್ದು, ಅಧಿಕಾರಿಗಳು ನಿಗಾವಹಿಸಬೇಕಿದೆ ಎಂದು ಆಗ್ರಹಿಸಿದರು.
ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರ ಮಾತನಾಡಿ, ಸಾಲ ಮರು ಪಾವತಿಸಲಾಗದೇ ಬ್ಯಾಂಕಿನವರ ಕಿರುಕುಳದಿಂದ 6 ತಿಂಗಳಲ್ಲಿ 500 ಜನ ರೈತರು ಆತ್ಮಹತ್ಯೆಗೀಡಾಗಿದ್ದಾರೆ. ಸಾಲ ತೀರಿಸದ ರೈತರ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇವುಗಳನ್ನು ವಾರದೊಳಗೆ ಮರು ಆರಂಭಿಸಲು ಕ್ರಮ ಜರುಗಿಸಿ. ಇಲ್ಲವಾದರೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಸಂಪಗಾವಿ, ಈರಣ್ಣ ಹಳ್ಳದ, ಮಹಾಂತೇಶ ಮುತವಾಡ, ಸುರೇಶ ಅಂಗಡಿ, ವಸಂತಗೌಡ ಪಾಟೀಲ, ಅಜ್ಜಪ್ಪ ಹಳ್ಳದ, ಸಿಂಧೂರ ತೆಗ್ಗಿ, ಶಿವಲಿಂಗಪ್ಪ ಬಿರಾದಾರ, ಸಿದ್ದಪ್ಪ ಪಟ್ಟದಕಲ್ಲ, ಸಿದ್ದಪ್ಪ ಚಂದರಗಿ, ಶ್ರೀಕಾಂತ ಹಟ್ಟಿಹೊಳಿ, ಶಂಕರ ಹಿತ್ತಲಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.