ADVERTISEMENT

ಬೆಳಗಾವಿ: ಬೈಪಾಸ್ ರಸ್ತೆ ಕಾಮಗಾರಿ ಆರಂಭ, ಜಮೀನು ನೀಡಲು ರೈತರು ವಿರೋಧ‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 7:19 IST
Last Updated 12 ನವೆಂಬರ್ 2021, 7:19 IST
ಹಲಗಾ- ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ
ಹಲಗಾ- ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ    

ಬೆಳಗಾವಿ: ತಾಲ್ಲೂಕಿನ ಮಚ್ಛೆ ಹೊರವಲಯದಲ್ಲಿ ಹಲಗಾ- ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ.

ಹತ್ತಕ್ಕೂ ಹೆಚ್ಚು ಜೆಸಿಬಿ, ಇಟಾಚಿ ಮೊದಲಾದವುಗಳನ್ನು ಬಳಸಿ ಸಮತಟ್ಟು ಮಾಡಲಾಗುತ್ತಿದೆ. ಟಿಪ್ಪರ್‌ಗಳಲ್ಲಿ‌ ಮಣ್ಣು ಸಾಗಿಸಲಾಗುತ್ತಿದೆ.

ಇನ್ನೊಂದೆಡೆ 8ರಿಂದ 10 ಮಂದಿ ರೈತರು ಜಮೀನು ನೀಡಲು ವಿರೋಧಿಸಿ ಕ್ಯಾರೆಟ್ ಬೆಳೆಯಿರುವ ಜಮೀನೊಂದರಲ್ಲಿ ಕುಳಿತು ಧರಣಿ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ADVERTISEMENT

ಕಬ್ಬು, ಭತ್ತ ಹಾಗೂ ಕ್ಯಾರೆಟ್ ಮತ್ತು ದಾಖಲೆಗಳನ್ನು ಪ್ರದರ್ಶಿಸಿ ಪ್ರತಿಭಟಿಸಿದರು.

ಬೆಳೆಯಲ್ಲಿ ಕಾಮಗಾರಿ ಮಾಡಲು ಬಂದಿದ್ದಕ್ಕೆ ರೈತ ರವಿ ಸೂರ್ಯವಂಶಿ ವಿರೋಧ ವ್ಯಕ್ತಪಡಿಸಿದರು. ಜೆಸಿಬಿ ಮುಂದೆ ಬಂದು ಬೆಳೆ ಹಾನಿ ಮಾಡದಂತೆ ಎಚ್ಚರಿಕೆ ನೀಡಿದರು. ಬೆಳೆ ನಾಶ ಮಾಡುವುದಿಲ್ಲ; ಬೇರೆ ಕಡೆ ಕೆಲಸ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭರವಸೆ ನೀಡಿದ್ದರು.

ಈಗ ಏಕಾಏಕಿ ಬಂದು ಬೆಳೆ ಇರುವ ಜಮೀನಿನಲ್ಲಿ ಕೆಲಸ ಆರಂಭಿಸಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಕ್ಯಾರೆಟ್ (ಗಜ್ಜರಿ) ಬೆಳೆ ನಾಶಪಡಿಸಲು ಬಂದಿದ್ದಾರೆ ಎಂದು ದೂರಿದರು.

ರೈತ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೆ, ಬೆಳೆ ಇದ್ದ ಜಮೀನು ಬಿಟ್ಟು ಬೇರೆ ಕಡೆ ಕಾಮಗಾರಿ ಆರಂಭಿಸಲಾಯಿತು.

ಜಿಲ್ಲಾಧಿಕಾರಿ ಭೇಟಿ: ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿದರು. ಈ ವೇಳೆ ಗಜ್ಜರಿ ಬೆಳೆಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತ ರವಿ ಸೂರ್ಯವಂಶಿ ಮನವಿ ಮಾಡಿದರು.

ತಮ್ಮ ಗದ್ದೆಯಲ್ಲಿ ಬಾವಿ ಇದೆ. ಅದೂ ಹೋಗಲಿದೆ. ನಮ್ಮ ಜಮೀನಿಗೆ ಪರ್ಯಾಯವಾಗಿ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ; ಕಾಮಗಾರಿ ನಡೆಸಲು ಸಹಕರಿಸಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಡಿಸಿಪಿ ವಿಕ್ರಂ ಅಮಟೆ ಇದ್ದರು.

ಕಾಮಗಾರಿ ವೀಕ್ಷಣೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದೆ. ಒಟ್ಟು 825 ಜನ ರೈತರಿಗೆ ₹ 27ಕೋಟಿ ಪರಿಹಾರ ನೀಡಿದ್ದೇವೆ. ಉಳಿದವರ ಮನವೊಲಿಸಿ ಪರಿಹಾರ ನೀಡುತ್ತೇವೆ. ಅವರು ಪರಿಹಾರ ತೆಗೆದುಕೊಳ್ಳದಿದ್ದರೆ ನ್ಯಾಯಾಲಯದಲ್ಲಿ ಪರಿಹಾರದ ಹಣವನ್ನು ಜಮಾ ಮಾಡುತ್ತೇವೆ ಎಂದು ತಿಳಿಸಿದರು.

ಯಾರೂ ಮಧ್ಯವರ್ತಿಗಳ ಬಳಿ ಹೋಗದೇ ನಮ್ಮ ಕಚೇರಿಗೆ ಬಂದರೆ ಪರಿಹಾರ ನೀಡುತ್ತೇವೆ. ಭೂಮಿ ಕಳೆದುಕೊಳ್ಳದ ರೈತರಿಗೆ ಪರಿಹಾರ ಹೋಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಅದು ಆರೋಪವಷ್ಟೆ. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು ಎಂದರು.

ನಾನು ಕಾಮಗಾರಿ ನಡೆಯುವ ಸ್ಥಳ ಪರಿಶೀಲನೆ ಮಾಡಿದ್ದೇನೆ. ಬೆಳೆಗೆ ತೊಂದರೆ ಆಗದಂತೆ ಕೆಲಸ ನಡೆಸುತ್ತಿದ್ದಾರೆ. ಯಾರ‌್ಯಾರಿಗೆ ಕಡಿಮೆ ಜಮೀನಿದೆಯೋ ಅವರಿಗೆ ಪರ್ಯಾಯ ಜಮೀನು ನೀಡುವ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದರು.

ರೈತರು ಜಮೀನು ನೀಡಲು ವಿರೋಧಿಸಿ ಧರಣಿ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.